ಮಕ್ಕಳ ಸಾಹಿತ್ಯ ಎಂದಾಗ. ಯಾವ ವಯಸ್ಸಿನ ಮಕ್ಕಳು ಎಂಬ ವಿಚಾರವೂ ಗಮನಾರ್ಹ ಸಂಗತಿಯಾಗುತ್ತೆದೆ. ಹದಿನೈದು ವರ್ಷದೊಳಗಿನ ಮಕ್ಕಳನ್ನು, ಮುಗ್ಧರು ಎಂದು ಗುರುತಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಹು ಬೇಗ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅನಿರ್ಬಂಧಿತ ಮನರಂಜನಾ ಯುಗದಲ್ಲಿ ನಾವು ಬದುಕುತ್ತಿದ್ದು, ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಗಮನಿಸದಿರುವಂತಿಲ್ಲ. ಆದುದರಿಂದ ಈ ಕಾಲದಲ್ಲಿ ಹುಟ್ಟಿದ ಮಕ್ಕಳ ಸಾಹಿತ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತುತ ಪ್ರೊ. ನಾಗ ಎಚ್. ಹುಬ್ಬಿ ಸಂಪಾದಕರಾಗಿ ತಂದಿರುವ ಸಂಕಲನದ ಆಯ್ಕೆಯ ಚೌಕಟ್ಟು, ಹೀಗೆ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿಗಳಿಗೆ ಎಂಬ ವಿಚಾರ ಗಮನಾರ್ಹ ಸಂಗತಿಯಾಗುತ್ತದೆ. ಈ ಸಂಕಲನದ ಸಂಪಾದಕರಾಗಿರುವ ಪ್ರೊ. ನಾಗ ಹುಬ್ಬಿ ಕನ್ನಡ ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿರುವ ರಾಂಚಿ (ಝಾರ್ಖಂಡ್)ಯಲ್ಲಿ ಕುಳಿತು ಕನ್ನಡ ಸಾಹಿತ್ಯಕ್ಕೆ ನಿರಂತರವಾಗಿ ಕೊಡುಗೆ ನೀಡಿದ್ದಾರೆ. ಕತೆಗಾರರಾಗಿ, ಅನುವಾದಕರಾಗಿ ಹತ್ತಾರು ಕೃತಿಗಳನ್ನು ನೀಡಿದ್ದಾರೆ. ಮಕ್ಕಳ ಸಾಹಿತ್ಯ ಕೃತಿಗಳನ್ನು ಬೇರೆ ಭಾಷೆಗಳಿಂದ ಅನುವಾದಿಸಿದ್ದಾರೆ. ಬುಡಕಟ್ಟು ಜನಾಂಗದ ಅಧ್ಯಯನ ಕ್ಷೇತ್ರಕ್ಕೆ ಅವರ ಕೊಡುಗೆ ಅಮೂಲ್ಯವಾದುದು. 'ಜೇನುಹುಳುವಿನಂತೆ ಸದಾಕಾಲವೂ ಸೃಜನಶೀಲವಾಗಿರುವ ಅವರ ಈ ಮಕ್ಕಳ ಸಾಹಿತ್ಯ ಸಂಕಲನ ಅವರ ಕಾರ್ಯತತ್ಪರತೆಗೆ ಒಂದು ಹೊಸ ಸೇರ್ಪಡೆ.