ಪ್ರಿಯ ಪ್ರಸಾದ್ ಚತುರ್ಮುಖ ಬಸದಿಯ ಕಲ್ಲ ಮೇಲೆ ಕೂತು ಪುಟ್ಟ ಚೀಲದಿಂದ ಬಿಟು, ಚಕ್ಕುಲಿ, ಬನ್ನುಗಳನ್ನು ಮುಖದ ಬಣ್ಣ, ತುಟಿಯ ಕೆಂಪು ಹಾಳಾಗದಂತೆ ತಿನ್ನುವ ಮರಿ ಮಹಿಷಾಸುರ "ವೇಷದ ಸಂತು". ನಿಗೂಢ ಮಳೆಯ ಕಾಡಿನಲ್ಲಿ ಕಂಬಳಿಕೊಪ್ಪೆ ಹಾಕಿಕೊಂಡು, ಅದೃಷ್ಟಕ್ಕಾಗಿ ಕಾದವನಂತೆ, ಕಲ್ಲಣಬೆಗಾಗಿ ಅಲೆಯುವ ನಿಚ್ಚು, ತನ್ನ ಸಿರಿಕಂಠದ ಭಾಗವತಿಕೆಯ ಯಕ್ಷಬಿಂಬಕೆ ತಾನೇ ಮಾರು ಹೋಗಿ, ತನ್ನನ್ನೇ ಕಳೆದುಕೊಂಡು ಕಂಗಾಲಾದ ಗಿರಿಧರ, ಇಂಥವರ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀಯ. ಮೇಲ್ನೋಟಕ್ಕೆ ಒಂದು ಬಗೆಯ ವರ್ಣನಾತ್ಮಕ ಗುಣ ಈ ನಿರೂಪಣೆಗಳಲ್ಲಿ ಎದ್ದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ಅದು ಆಯಾ ಜೀವಿಗಳ ಖಾಸಗೀ ಜೀವನದ ದಾರುಣತೆಯ ವಿರೋಧಾಭಾಸವನ್ನು ಧ್ವನಿಸುತ್ತದೆ. ಹಬ್ಬದ ನೆಪದಲ್ಲಿ ಪುರಾಣದ ವೇಷಗಳನ್ನು ತೊಟ್ಟುಕೊಂಡು ಮನೆಮನೆಗೆ ಕಾಣಿಕೆಗಾಗಿ ಅಲೆಯುವುದು, ಕಲ್ಲಣಬೆಯ ರುಚಿ ಏನೆಂದೇ ತಿಳಿಯದವ ಅದನ್ನು ಅಲೆದಾಡಿ ಹಕ್ಕಿ ತಂದು ತನಗಾಗಿ ಒಂದನ್ನೂ ಉಳಿಸಿಕೊಳ್ಳದೇ ಪುಡಿಗಾಸಿಗೆ ಮಾರುವುದು, ಸಾರ್ವಜನಿಕರ ಕಣ್ಣಲ್ಲಿ ಏರುತ್ತ ಹೋದ ಕಲಾವಿದ ಅತ್ಮಮೋಹದ ನರಕಕ್ಕೆ ಜಾರುವುದು, ಇಂಥ ವಿರೋಧಾಭಾಸಗಳು ಈ ಕತೆಗಳ ಮುಖ್ಯ ಲಕ್ಷಣಗಳಾಗಿ ನನ್ನನ್ನು ತಟ್ಟಿದವು. ಮೊದಲೇ ಅಸ್ಪಷ್ಟವಾಗಿಯಾದರೂ ಮನಗಂಡಿರುವ ಕತೆಯನ್ನು ಆರಾಮಾಗಿ “ಎಲೆಗೆ ಸುಣ್ಣ ಹಚ್ಚುತ್ತ ಹೇಳುವ ಶೈಲಿ" ನಿನ್ನದು. ಹೀಗಾಗಿ ಚೂರೂ ಹದ ತಪ್ಪಿದರೂ ವಿರೋಧಾಭಾಸದ ಆ ಅಜ್ಞಾತ ನಾಡಿಬಿಂದು ಎಲ್ಲೋ ಹಗುರಾಗಿಬಿಡಬಹುದು, ಅಥವಾ ಮರೆಯಾಗಿಬಿಡಬಹುದು. ನಿನಗೂ ಗೊತ್ತಿರದ ಸಂಗತಿಗಳು ಬಂದು ಸೇರಿಕೊಳ್ಳಲು ನೀನು ಬಾಗಿಲುಗಳನ್ನು ತೆರೆದಿಟ್ಟುಕೊಂಡಾಗ ಮಾತ್ರ ಹೊಸತೊಂದು ಅನಿರೀಕ್ಷಿತ, ಅಸಂಗತ ಅಂಶ ಬಂದು ನಿನ್ನನ್ನು ಚಕಿತಗೊಳಿಸಬಹುದು. ಗಿರಿಧರನಿಗೆ ಅನಿಸುವಂತೆ, ಕಥನವೂ ಸಹ ಕಾಣದ ಕಡಲಿನೆಡೆಗೆ ಚಲಿಸುತ್ತಿರುವ ನದಿಯಂತೆ, ಅದು ತನ್ನ ದಂಡೆಯನ್ನು ತಾನೇ ರೂಪಿಸಿಕೊಳ್ಳುತ್ತದೆ. ನಿನ್ನ ಬರವಣಿಗೆ ನಿನ್ನನ್ನು ಒರೆಗೆ ಹಚ್ಚುತ್ತಲೇ ಇರಲಿ, ಹೊಸ ಹೊಸ ಅಸಂಗತ, ಅನಿರೀಕ್ಷಿತ ತಿರುವುಗಳಿಗೆ ತೆರೆದುಕೊಳ್ಳುತ್ತ ಜೀವಜಾಲದೊಂದಿಗಿನ ನಂಟನ್ನು ಒಳಗೊಳ್ಳುತ್ತ ಪ್ರವಹಿಸಲಿ, ಜಯಂತ ಕಾಯ್ಕಿಣಿ