nil
ಸಾಧಕರ ಬದುಕುಗಳು ನಮ್ಮ ಬದುಕನ್ನು ಎತ್ತರಿಸಿಕೊಳ್ಳುವುದಕ್ಕೆ, ಉದಾತ್ತೀಕರಿಸಿಕೊಳ್ಳುವುದಕ್ಕೆ ನಿದರ್ಶನ, ಪ್ರೇರಣೆ ಮತ್ತು ಮಾರ್ಗದರ್ಶನಗಳನ್ನು ನೀಡುತ್ತವೆ. ನಮ್ಮ ನಾಡಿನಲ್ಲಿ ಅನೇಕ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರಿಗೆ ಅವರೇ ಗುರುವಾಗಿದ್ದಾರೆ. ಈ ನಿಟ್ಟಿನಲ್ಲಿ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾಗುತ್ತವೆ. 'ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ದಿನವ ಕಳೆ, ಗುರು ಶಿಷ್ಯಪಟ್ಟಗಳು ನಿನಗೇಕೆ? ನಿನಗೆ ನೀನೇ ಗುರುವೊ ಮಂಕುತಿಮ್ಮ'. ಡಿ.ವಿ.ಜಿ.ಯವರು ಹೇಳುವಂತೆ ನಾವು ಪಡೆದ ಎಂಜಲು ಅಂದರೆ ಅನ್ಯರಿಂದ ದೊರೆತ ತಿಳಿವಳಿಕೆ. ಇದು ಸಾರ್ಥಕವಾಗಬೇಕಾದರೆ ನಮ್ಮ ಪ್ರಜ್ಞೆ ಜಾಗೃತವಾಗಿರಬೇಕು. ಅದಕ್ಕೆ “ನಿನಗೆ ನೀನೇ ಗುರು" ಎಂದಿದ್ದಾರೆ. ಅರಿವಿನ ಬೆಳಕಾಗಿ ದಾರಿ ತೋರುವ ಗುರು ನಮ್ಮೊಳಗೆ ಇದ್ದಾನೆ. ಅಂತರಂಗದ ಆತ್ಮಸಾಕ್ಷಿಗಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ. ನಮ್ಮೊಳಗಿನ ಪ್ರಜ್ಞೆ ಜಾಗೃತವಾಗದಿದ್ದರೆ ನಾವು ಪಡೆದ ಜ್ಞಾನವೆಲ್ಲವೂ ವ್ಯರ್ಥವಾಗುತ್ತದೆ. ಗುರುಶಿಷ್ಯ ಪಟ್ಟಗಳನ್ನು ಬಿಟ್ಟು ನಮಗೆ ನಾವೇ ಬೆಳಕಾಗಬೇಕು, ಸ್ಫೂರ್ತಿಯ ಸೆಲೆಯಾಗಬೇಕು, ಪ್ರೇರಣೆಯ ಅಲೆಯಾಗಬೇಕು. ಈ ಶಕ್ತಿಯು ಇಂತಹ ಸಕಾರಾತ್ಮಕ ದೃಷ್ಟಿಯಿಂದಲೇ ಜೀವನ ಸಾರ್ಥಕವಾಗುವುದಲ್ಲವೇ? ಕನ್ನಡ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಕುತೂಹಲಕಾರಿ ವಿವರಗಳ ಹಿನ್ನೆಲೆಯೊಂದಿಗೆ ಅವರ ವೈಶಿಷ್ಟ್ಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಇಂದು ನಮ್ಮೆದುರು ಸಾಧನೆಗೆ ಅನೇಕ ಬಾಗಿಲುಗಳು ತೆರೆದಿವೆ. ಸಾಧನೆಯ ರಂಗ ಕೈಬೀಸಿ ಕರೆದಿದೆ. ಈ ಎಲ್ಲ ಅವಕಾಶಗಳನ್ನು ನಮ್ಮ ತಾರುಣ್ಯದ ಬಿಸುಪಿನಲ್ಲಿ ಇರುವವರು ಬಳಸಿಕೊಳ್ಳಲಿ ಎಂಬುದು ನನ್ನ ಪುಟ್ಟ ಆಸೆ. ಸಾಧನೆಯ ರಂಗಕ್ಕೆ ಅವರನ್ನು ಆಹ್ವಾನಿಸುವ ಸಣ್ಣ ಪ್ರಯತ್ನ ಈ ಪುಸ್ತಕ. ಇಲ್ಲಿನ ಸಾಧಕರ ಬದುಕು ಇಂದಿನ ತಲೆಮಾರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇನೆ.
Showing 211 to 240 of 463 results