ಒಟ್ಟು 28 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಉದಾಹರಣೆಗೆ 'ಎನೌಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ.. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯರನ್ನೇಕೆ ದೇವತಾ ಮನುಷ್ಯ ಅನ್ನೋದು' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಅಂಗಲ್‌ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ... ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕ್ರಶ್ಮಿಕಾ ಆಗುವ ಮುನ್ನ...' ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು! ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ. ಗಣೇಶ್ ಕಾಸರಗೋಡು