ಇಪ್ಪತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ಅಲ್ಬೆ ಕಮೂ ಬರೆದ ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲಾಗುವ ದಿ ಪ್ಲೇಗ್ ಕೃತಿಯೂ ಮನುಷ್ಯರ ಅಸಹಾಯಕತೆ, ದಾರುಣತೆ, ದುಷ್ಟತನ ಮತ್ತು ಕರುಣೆಯನ್ನು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ. ಕಾಯಿಲೆಯೊಂದು ರೂಪಕವಾಗಿ ಕೊಳೆತ ಸಮಾಜದ ಅಸ್ವಾಸ್ಥ್ಯವನ್ನು ಬೆಳಕಿಗೆ ತರುವುದೇ ಈ ಕೃತಿಯ ಮುಖ್ಯ ಆಶಯ. ಅದಾಗಿ ಏಳು ದಶಕದ ಬಳಿಕ ನಾವು ಬದುಕುತ್ತಿರುವ ವಿಶ್ವವು ಒಂದು ಜಾಗತಿಕ ಸಾಂಕ್ರಾಮಿಕವನ್ನು ಎದುರಿಸಿತು. ಇಂದು ಬದುಕುಳಿದಿರುವ ನಾವೆಲ್ಲ ಅದಕ್ಕೆ ಸಾಕ್ಷಿಯಾದೆವು. ಪತ್ರಕರ್ತರಾದ ಸಂತೆಕಸಲಗೆರೆ ಪ್ರಕಾಶ್ ಅವರು ಕೂಡ ಆ ಕಾಲಘಟ್ಟದ ಅನುಭವವನ್ನು ಕಥೆಗಳ ರೂಪದಲ್ಲಿ 'ಬೂಸ್ಟರ್ ಡೋಸ್ ಮುನಿಯಮ್ಮ' ಎಂಬ ಸಂಕಲನದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಹನ್ನೆರಡು ಕಥೆಗಳ ಈ ಸಂಕಲನವು ಜಾಗತಿಕ ಮಹಾಮಾರಿಯ ರುದ್ರಭಯಾನಕತೆಯ ವಿವಿಧ ರೂಪವನ್ನು ಕಥೆಗಳಲ್ಲಿ ಹಿಡಿದಿರಲು ಯತ್ನಿಸುತ್ತದೆ. ಜಾಗತಿಕ ಕಾಯಿಲೆಯ ಸ್ವರೂಪ ಮನೆ-ಕುಟುಂಬ-ಗ್ರಾಮ-ನಗರದ ಬೀದಿಗಳಲ್ಲಿ ಹೇಗೆ ಕಾಣಿಸಿಕೊಂಡಿತು. ಯಾವ ಪರಿಣಾಮವನ್ನುಂಟು ಮಾಡಿತು ಎಂದು ಇಲ್ಲಿನ ಕಥೆಗಳು ಅರಿಯಲು ಪ್ರಯತ್ನಿಸುತ್ತವೆ.