nil
ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು.