ನಾಳೆಗಿದು ಇರದಿದ್ದರೆ ಹೇಗೆ ಎಂಬ ಆತಂಕಕ್ಕೂ, ಇದು ನಾಳೆಗೂ ಇರಬೇಕು ಎಂಬ ಆಶಯಕ್ಕೂ ಯಾವುದೇ ಅರ್ಥವಿಲ್ಲ. ಹಿಂದೆ ಎಷ್ಟೆಲ್ಲಾ ಆಗಿಹೋಗಿದೆ, ಕೂಡಿದೆ, ಕಳೆದಿದೆ, ನಾಶವಾಗಿದೆ, ಹುಟ್ಟಿದೆ. ಮುಂದೆಯೂ ಏನೆಲ್ಲಾ ಆಗಲಿಕ್ಕಿರಬಹುದು. ಅಖಂಡ ಕಾಲದ ಯಾವುದೋ ಬಿಂದುವಿನಲ್ಲಿ ನಿಂತಿದ್ದೇವೆ ನಾವು. ಆ ಬಿಂದು ಸಂಪೂರ್ಣ ಮುಗಿತಾಯಕ್ಕೆ ಎಷ್ಟು ಅಂತರದಲ್ಲಿದೆಯೋ ನಮಗೆ ಹೇಗೆ ಗೊತ್ತಾಗಬೇಕು ? ಇದು ಒಳ್ಳೆಯ ಕಾಲ ಅಂತ ನಿರ್ಧರಿಸುವ ಮಾನದಂಡ ಯಾವುದು ? ನಾವು ಬದುಕಿದ್ದವೆಂಬ ಕಾರಣಕ್ಕೆ ಅದು ಒಳ್ಳೆಯ ಕಾಲವೇ ? ಆಗಿರಬಹುದು, ಆಗಿಲ್ಲದಿರಬಹುದು. ಕಾಲಕ್ಕೆ ಒಳಿತು ಕೆಡುಕುಗಳೆಂಬುದಿದೆಯೇ ? ನಮ್ಮ ನೋಟ ಸಂಕುಚಿತ. ಕಾಲದ್ದು ಸಮಗ್ರ ನೋಟ. ನಮ್ಮ ಕಾಲಕ್ಕೆ ಬಹುದೊಡ್ಡ ಸಂಗತಿಯಾದದ್ದು ಕಾಲದ ಪಾಲಿಗೆ ಯಕಶ್ಚಿತ್ ಆಗಿರಬಹುದು. ನಮಗೆ ಪತ್ರಗಳ ಕಾಲದ ಕಾಯುವಿಕೆಯ ಭಾವುಕತೆಯೂ ಬೇಕು. ವಾಟ್ಸಪ್ ಗ್ರೂಪೂ ಬೇಕು. ಆದರೆ ಅವೆರಡೂ ಏಕಕಾಲದಲ್ಲಿ ಒಟ್ಟಿಗೇ ಇರಲಾರವು. ಛೇ ಪತ್ರವೆಷ್ಟು ಚೆಂದವಿತ್ತು ಎಂಬ ನೆನಪಿನೊಂದಿಗೇ ಅದನ್ನು ಗೌರವಯುತವಾಗಿ ಬೀಳ್ಕೊಟ್ಟು ಹೊಸ ರೂಪಾಂತರವನ್ನು ಸ್ವಾಗತಿಸಬೇಕು. ಅದು ಅನಿವಾರ್ಯ ಕೂಡ. ಆದರೂ ನಮಗೆ ಹಿಂದೆ ಚೆಂದವಿತ್ತು ಅನಿಸಬೇಕು. ಬದಲಿನ ನಿಯಮ, ಅನಿವಾರ್ಯತೆ ಎಲ್ಲದರ ಅರಿವಿದ್ದೂ ಹಿಂದೆ ಹೀಗಿತ್ತಲ್ಲಾ... ಎಂಬ ನೆನಪು ಮತ್ತು ಕಳೆದುಹೋಗುವಾಗಿನ ಕಳವಳ ಕಾಡಬೇಕು ಕಿಂಚಿತ್ತಾದರೂ. ಹಾಗೆ ಕಾಡಿದರೇನೇ ನಾವು ಮನುಷ್ಯರು!