ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹಲವರ ಕಥೆ, ಕಾದಂಬರಿಗಳು ಚಿತ್ರಗಳಾಗಿವೆ. ಕಾವ್ಯಗಳು ಹಾಡುಗಳಾಗಿವೆ. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪೈಕಿ ಮೂವರು ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂಭಾಷಣೆಯೇ ಇಲ್ಲದ ಚಿತ್ರಗಳು, ಒಂದೇ ಟೇಕ್‌ನಲ್ಲಿ ತಯಾರಾದ ಚಿತ್ರಗಳು, ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಣವಾದ ಚಿತ್ರಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಚಿತ್ರಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರಗಳು ಇಲ್ಲಿವೆ. ಇನ್ನು ಕನ್ನಡದಲ್ಲಾದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಹಲವು ದಾಖಲೆಗಳು, ಸಾಹಸಗಳು, ವೈಶಿಷ್ಟ್ಯಗಳು, ಸ್ವಾರಸ್ಯಗಳು, ಹೆಗ್ಗಳಿಕೆಗಳು ಕನ್ನಡ ಚಿತ್ರರಂಗದಲ್ಲಿ ಆಗಿದೆ. ಇವೆಲ್ಲವನ್ನೂ ಮೆಲುಕು ಹಾಕುವ ಪ್ರಯತ್ನವೇ 'ಚಂದನವನದೊಳ್'. ಮುಂದಿನ ತಲೆಮಾರಿನ ಚಿತ್ರಕರ್ಮಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಕೈಪಿಡಿಯಾಗಬಲ್ಲ ಪುಸ್ತಕ ಇದು.