ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..
ಉತ್ತರಾಪಥೇಶ್ವರ ಎಂಬ ಬಿರುದಾಂಕಿತ, ಕಾನ್ಯಕುಬ್ಬದ ಸಾಮ್ರಾಟ, ಅಪಾರ ಸೈನ್ಯವನ್ನು ಹೊಂದಿದ ಹರ್ಷವರ್ಧನನಂತಹ ಮಹಾಪ್ರತಾಪಿಯನ್ನು ರಣತಂತ್ರದ ಮೂಲಕವೇ ಬಾದಾಮಿ ಚಾಲುಕ್ಯ ಪುಲಿಕೇಶಿ ಸೋಲಿಸಿದ್ದಲ್ಲದೇ, ಸೌಜನ್ಯ ಮತ್ತು ಸ್ನೇಹ ವಿಶ್ವಾಸಗಳಿಂದ ಅವನ ಹೃದಯವನ್ನು ಗೆದ್ದು ಅವನಿಂದಲೇ ಪರಮೇಶ್ವರ ಪುಲಿಕೇಶಿ ಎಂದು ಹೊಗಳಿಸಿಕೊಂಡ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕುರಿತ ಐತಿಹಾಸಿಕ ಕಾದಂಬರಿ.
ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..
ಅಸಲಿಗೆ ಹೃದಯವೆಂದರೆ ಏನು? ಪ್ರೀತಿ, ದ್ವೇಷ, ಕೋಪ-ತಾಪ, ಆಘಾತ ಎಲ್ಲವನ್ನೂ ಯಾಕೆ ಹೃದಯಕ್ಕೆ ಸಮೀಕರಿಸುತ್ತೇವೆ? ‘ಅವನು ಬಹಳ ಹೃದಯವಂತ ಬಿಡಲೇ’ ಎಂದು ಮೆಚ್ಚುಗೆಯಿಂದ ಮಾತನಾಡುವ ನಾವು ‘ತೀರಾ ನೊಂದ ಹೃದಯ ಕಣೋ ಅವಳದ್ದು!’ ಎಂದೂ ಉದ್ಗಾರ ತೆಗೆಯುತ್ತೇವೆ.
ಕನ್ನಡ ನಟ, ನಿರ್ದೇಶಕ ಇದೀಗ ತಮ್ಮದೊಂದು ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆರ್ಟ್ ಆಫ್ ಸಕ್ಸಸ್ ಎಂಬುದು ಅವರ ಕೃತಿ. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಬಂದ ನಟ ರಮೇಶ್ ಇಂಥದೊಂದು ಯಶಸ್ಸಿನ ಬಗ್ಗೆ ಹೇಳಲು, ಮಾರ್ಗದರ್ಶಿಯಾಗಲು ತುಂಬ ಅರ್ಹರು. ಅವರ ಈ ಕೃತಿ ಯಶಸ್ಸಿನ ಕಲೆಯ ಬಗ್ಗೆ ಹೇಳುತ್ತದೆ. ರಮೇಶ್ ಅವರದೇ ಆದ ಶೈಲಿಯೊಂದು ಈ ಕೃತಿಯ ಮುಖ್ಯ ಆಕರ್ಷಣೆ.
ಏನನ್ನೂ ಅಪೇಕ್ಷಿಸಿದ, ಯಾರನ್ನೂ ಉಪೇಕ್ಷಿಸದ ಈಕೆ ಅಪ್ಸರೆ. ಅಮರರಿಗೆ ಕಾಲದ ಹಂಗಿಲ್ಲ. ಹಾಗಾಗಿ ಭೂತ ಭವಿಷ್ಯತ್ತಿನ ಎಲ್ಲೆಗಳಿಲ್ಲ, ನಿರಂತರ ವರ್ತಮಾನ. ಕಾದದ್ದು ಊರ ಚೌಡಿಯಂತೆ, ಮುಟ್ಟಿದ್ದೆಲ್ಲಾ ಅಮೃತ, ಬೇಯಿಸಿದ ಅನ್ನ, ಕಾಯಿಸಿದ ಹಾಲು ಎಲ್ಲಾ ಹದ. ಕುದಿಯುತ್ತೆ; ಉಕ್ಕಲ್ಲ, ಕತ್ತಲ ಅಟ್ಟದ ಜಾಡಿಯ ಮಿಡಿ ಉಪ್ಪಿನಕಾಯಿಯೂ ವರ್ಷಗಳಾದರೂ ಕೆಡೊಲ್ಲ. ಉರಿಗಾರದ ಬಾಣಂತಿ ಲೇಹ್ಯ ಕೇವಲ ಅವಶ್ಯಕ ಕಾವನ್ನಷ್ಟೇ ಕೊಡುತ್ತೆ. ಆಷ್ಟ್ಯಾಕೆ ಸುತ್ತಲಿನ ನಿರ್ಲಿಪ್ತ ಗಾಳಿ ಕೂಡಾ ಅ೦ಟಿಕೊ೦ಡವರಿಗೆ ಉಸಿರಾಗುತ್ತೆ. ಓದಿ ಮುಗಿಸಿದೆ, ಮೈ ಮನ ತು೦ಬಿದೆ. ಭಾವೋದ್ವೇಗದಲ್ಲಿ ಅಲ್ಲಲ್ಲಿ ಉಕ್ಕಿದರೂ ಎಲ್ಲೆ ಮೀರಿ ಎಲ್ಲೂ ಚೆಲ್ಲಿಲ್ಲ. ಹಾಲು ಕುದ್ದು ನೀರು ಆವಿಯಾಗಿ ಅನುಭವದ ಸಾರ ಹೆಪ್ಪುಗಟ್ಟಿದಾಗ ಖಾಲಿತನ ಕಾಡಿದ್ದುಂಟು ಹೌದು ಆದರೆ ಅದನ್ನು ಮೀರಿದ ಪರಿಮಳ ಆವರಿಸಿದ್ದು ಸುಳ್ಳಲ್ಲ. -ಸೇತುರಾಂ
ಫಲ್ಗುಣಿ ಎಂಬ ಮಿಸ್ಟೀರಿಯಸ್ ಹುಡುಗಿ ಏನಾಗಬೇಕು ನನ್ನ ಬದುಕಿಗೆ? ಅಂದು ಅವಳ ಕಾರಣದಿಂದಲೇ ಸಮ್ಯಕ್ ನಿಂದ ಸಂಬಂಧ ಕಡಿದುಕೊಂಡೆ. ಇಂದು ಅವಳು ಕರೆದಿದ್ದಕ್ಕೆ ಮತ್ತದೇ ಹಳೆಯ ಜಾಗಕ್ಕೆ ಹೋಗುತ್ತಿದ್ದೇನೆ. ನಾವು ಭೇಟಿಯಾಗೋ ಪ್ರತಿ ವ್ಯಕ್ತಿಯೂ ಯಾವುದೋ ಉದ್ದೇಶಕ್ಕೆ ನಮಗೆ ಸಿಕ್ಕಿರುತ್ತಾರೆ ಅಂತಾರಲ್ಲ? ನಿಜವೇ? ಇರಲಾರದು. ನಮಗಾಗಿ ಯಾರು ಹೀಗೆಲ್ಲಾ ಪ್ಲಾನ್ ಮಾಡುತ್ತಾರೆ! ಎಲ್ಲವೂ ಕೋ-ಇನಸಿಡೆನ್ಸ್ ಅಷ್ಟೇ. ಲೈಫ್ ಇಸ್ ಅ ಕಲೆಕ್ಷನ್ ಆಫ್ ರಾಂಡಮ್ ಇನ್ಸಿಡೆನ್ಸ್ ಹೆಚ್ಚಿನ ಅರ್ಥಗಳನ್ನು ನಾವೇ ಕಂಡುಕೊಂಡು ಅದರೊಳಗೊಂದು ಸಣ್ಣ ಥ್ರಿಲ್ ಅನುಭವಿಸುತ್ತಿರುತ್ತೇವೆ ಮೇ ಬಿ?...
ಮನೆ ಇಂಜಿನಿಯರ್" ಶೀರ್ಷಿಕೆ ಹೊತ್ತ ಈ ಪುಸ್ತಕದಲ್ಲಿ ನಿವೇಶನದಿಂದ ಮೊದಲಾಗಿ ಮನೆಯನ್ನು ಕಟ್ಟಲು ಅಗತ್ಯವಿರುವ ಎಲ್ಲ ತರಹದ ಉಪಯುಕ್ತ ಮಾಹಿತಿಗಳನ್ನು ಅಚ್ಚುಕಟ್ಟಾಗಿ, ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಕನ್ನಡ ಭಾಷೆಯಲ್ಲಿ ರಾಮ್‌ಕದಮ್‌ರವರು ಬರೆದಿದ್ದಾರೆ. ನನ್ನ ಬಹುಕಾಲದ ಪರಿಚಿತರಾದ ಇವರು ಕನ್ನಡ ಸಾರಸ್ವತ ಲೋಕಕ್ಕೆ ಒಂದು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕೆಲವು ವಿಷಯಗಳು ಸಂಕ್ಷಿಪ್ತವಾಗಿವೆಯಾದರೂ ಅಗತ್ಯವಿರುವಷ್ಟು ವಿವರಣೆಯನ್ನು ಒಳಗೊಳ್ಳುವ ಮೂಲಕ 'ಮನೆ ಇಂಜಿನಿಯರ್' ಪರಿಪೂರ್ಣತೆಯನ್ನು ಪಡೆದು ಕೊಳ್ಳುವುದರಲ್ಲಿ ಸಫಲವಾಗಿದೆ. ವಿಶ್ವದ ಕೆಲವು ದೇಶಗಳಲ್ಲಿ ಬಳಕೆಯಲ್ಲಿರುವ ಆಯ್ದ ಮನೆಗಳ ಮಾದರಿ ನಕಾಶೆಗಳೂ ಇದರಲ್ಲಿವೆ. ವಾಸ್ತುಶಾಸ್ತ್ರದ ಗೊಂದಲಗಳಿಗೆ ಆಧಾರಸಹಿತವಾದ ಸ್ಪಷ್ಟ ವಿವರಣೆಯಿದೆ. ವಿದ್ಯುತ್, ಪ್ಲಂಬಿಂಗ್, ಒಳಾಂಗಣ ವಿನ್ಯಾಸ, ತಾಂತ್ರಿಕ ಸಲಹೆ ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಮನೆಯನ್ನು ಕಟ್ಟುವವರಿಗೆ ಅಗತ್ಯವಾಗಬಹುದಾದ ಎಲ್ಲ ಮಾಹಿತಿಗಳು ಇಲ್ಲಿ ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಲಭ್ಯವಿದೆ. 'ಮನೆ ಕಟ್ಟಿನೋಡು, ಮದುವೆ ಮಾಡಿನೋಡು' ಎಂಬ ಕನ್ನಡದ ಗಾದೆ ಮಾತೊಂದಿದೆ. ಮದುವೆಯೇನೋ ಹಾಗೂ ಹೀಗೂ ಕೆಲವು ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಮಾಡಿ ಮುಗಿಸಿಬಿಡಬಹುದು. ಆದರೆ ಮನೆಯನ್ನು ಕಟ್ಟುವುದು ಹಾಗಾಗುವುದಿಲ್ಲ. ಅದು ಕಷ್ಟದ ಕೆಲಸ. ಎಲ್ಲವನ್ನೂ ತರ್ಕಬದ್ಧವಾಗಿ ಹೊಂದಿಸಬೇಕಾದ ಅನಿವಾರ್ಯತೆಯಿರುತ್ತದೆ. ಈ ನಿಟ್ಟಿನಲ್ಲ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ವೃತ್ತಿಪರರಾದ ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಮನೆಯನ್ನು ಕಟ್ಟುವ ಮಾಲೀಕರು ಹೀಗೆ ಪ್ರತಿಯೊಬ್ಬರಿಗೂ ಈ ಪುಸ್ತಕವು ಅತ್ಯಂತ ಉಪಯುಕ್ತವಾಗಿದೆ. ಇವರಿಗೆ ಶುಭವಾಗಲಿ. -ಎಸ್. ಶ್ಯಾಮಸುಂದರ್ ಆರ್ಕಿಟೆಕ್ಟ್, ಶಿವಮೊಗ್ಗ
"ನಮ್ಮ ಪ್ರೀತಿಪಾತ್ರರು ಸಾಧ್ಯವಾದಷ್ಟು ಕಾಲ ರಕ್ತಮಾಂಸದ ನಡುವೆ ಇರಲಿ ಎಂದು ಬಯಸುವುದೇ ನಿಜಕ್ಕೂ ಸ್ವಾರ್ಥ ಬಯಕೆ. ಇದು ನಮ್ಮ ದೌರ್ಬಲ್ಯದಿಂದ ಹುಟ್ಟಿಕೊಂಡಿದ್ದು ಅಥವಾ ಕಾಯವನ್ನು ತೊರೆದ ಬಳಿಕ ಅತ್ಯದ ಉಳಿವಿನ ಬಗ್ಗೆ ಇರುವ ನಂಬಿಕೆಯ ಫಲ. ಅಕಾರವು ಬದಲಾಗುತ್ತ ಬದಲಾಗುತ್ತ ಅಳಿದು ಹೋಗುತ್ತದೆ. ಆದರೆ ಮಾರ್ಗದರ್ಶಿಯಾದ ಚೈತನ್ಯವು ಬದಲಾಗುವುದೂ ಇಲ್ಲ, ಅಳಿದು ಹೋಗುವುದೂ ಇಲ್ಲ. ಪರಿಶುದ್ಧವಾದ ಪ್ರೀತಿಯು ಭೌತಿಕವಾದ ಕಾಯವನ್ನು ಮೀರಿ ಅಂತರಾತ್ಮವನ್ನು ಸೇರಿಕೊಂಡಾಗ ಅಗಣಿತ ಕಾಯಗಳಲ್ಲಿ ಇರುವ ಎಲ್ಲ ಜೀವಗಳಲ್ಲಿ ಏಕೀಭವಿಸುತ್ತದೆ..."
ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳವಳಿಯೂ ಆಗಿತ್ತು. ಅದು ಪುರುಷ, ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು. ಆದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಿಗೆ ಹೋಲಿಸದರೆ, ಮಹಿಳೆಯರು ವಹಿಸಿದ ಪಾತ್ರವು ಇತಿಹಾಸದ ಪುಟಗಳಲ್ಲಿ ಮಬ್ಬು ಮಬ್ಬಾಗಿ ದಾಖಲಾಗಿದೆ. ಆ ಹಿನ್ನಲೆಯಲ್ಲಿ ನೋಡಿದಾಗ ಬೆಳವಡಿ ಮಲ್ಲಮ್ಮ ಕೃತಿಯ ಮಹತ್ವ ನಮಗೆ ಅರಿವಾಗುತ್ತದೆ. ಬೆಳವಡಿ ಮಲ್ಲಮ್ಮ ಯುದ್ಧವ್ಯೂಹಗಳಿಗೆ, ಗಾಳಿವೇಗದ ಪ್ರಹಾರಗಳಿಗೆ, ಸ್ವಾಭಿಮಾನ, ಧೈರ್ಯ ಸಾಹಸಗಳಿಗೆ ಹೆಸರಾದವರು.
ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ.
ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಾ ಆದರೆ ಎಲ್ಲಿಂದ ಪ್ರಾರಂಭಿಸಬೇಕೆಂದು ತಿಳಿದಿಲ್ಲವೇ? "ಶ್ರೀಮಂತರಾಗೋಣ ಬನ್ನಿ" ಅರುಣ್ ಕಿಲ್ಲೂರು ಅವರು ಯಶಸ್ವಿ ಹೂಡಿಕೆಗಾಗಿ ಪ್ರಾಯೋಗಿಕ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತಾರೆ. ನಿಮ್ಮ ಪ್ರತಿಯನ್ನು ಇಂದು ಪಡೆದುಕೊಳ್ಳಿ ಮತ್ತು ನಿಮ್ಮ ಆರ್ಥಿಕ ಭವಿಷ್ಯವನ್ನು ನಿರ್ಮಿಸಲು ಪ್ರಾರಂಭಿಸಿ!
ಪುಸ್ತಕದ ಈ ಹತ್ತೂ ಕಥೆಗಳು ನನ್ನದೇ ಬಾಲ್ಯದಿಂದ ರೂಪು ತಳೆದಂತಹವು. ಒಂದಲ್ಲಾ ಒಂದು ರೀತಿಯಲ್ಲಿ ನನ್ನನ್ನು ತೀವ್ರವಾಗಿ ಕಾಡಿದ ಕಥೆಗಳಿವು. ಬಾಲ್ಯಕಾಲದ ನನ್ನೂರಿನ, ನನ್ನ ಬೀದಿಯ, ಕೇರಿಯ ಆತ್ಮಪ್ರಜ್ಞೆ ಈ ಕಥೆಗಳು, ಇವು ನಿಜಕ್ಕೆ ನಿಜ, ಕಲ್ಪನೆಗೆ ಕಲ್ಪನೆಯಂತಹದ್ದೇ ರೂಪಕಗಳು. ಇವು ಕೇವಲ ನನ್ನ ಬಾಲ್ಯದ ಕಥೆಗಳಾಗಿರದೆ, ಪುಟ್ಟ-ಪಟ್ಟಣಗಳಲ್ಲಿ ಬೆಳೆದ ನನ್ನಂಥ ಅನೇಕರು ತಮ್ಮ ಬಾಲ್ಯವನ್ನು ಸಮೀಕರಿಸಿಕೊಳ್ಳಬಹುದಾದ ಕಥೆಗಳು. ಇವು ಮಕ್ಕಳ ಕಥೆಗಳೂ ಹೌದು, ದೊಡ್ಡವರ ಕಥೆಗಳೂ ಹೌದು! ಎಲ್ಲಾ ವಯಸ್ಸಿನವರಿಗೂ ದಕ್ಕುವ ಹಾಗೆ, ನನಗೆ ಒಲಿದಿರುವ ಸರಳ ಭಾಷೆಯಲ್ಲಿ ಕಥೆಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಕಥೆಯು, ಸರಳವಾದ ಭಾಷೆ ಮತ್ತು ನಿರೂಪಣೆಯಲ್ಲಿದ್ದರೆ ಮಕ್ಕಳೂ ಕೂಡ ಸಲೀಸಾಗಿ ಓದಬಹುದೆಂಬ ಸಣ್ಣ ಉದ್ದೇಶವೂ ಇದರ ಹಿಂದಿದೆ. -ಮಂಜುನಾಥ್ ಕುಣಿಗಲ್
ಮಕ್ಕಳ ಸಾಹಿತ್ಯ ರಚನೆಗೆ ಬೇಕಾದ ಮುಗ್ಧ ಮನಸ್ಥಿತಿ, ಆದರ್ಶಪ್ರಿಯತೆ ಮತ್ತು ಬೆರಗು ನಮ್ಗಳಲ್ಲಿ ಇನ್ನೂ ಕಲುಷಿತಗೊಳ್ಳದೇ ಹಾಗೆಯೇ ಉಳಿದುಕೊಂಡು ໙໐໖໖. ಜನಪದ ಕತೆಗಳ ಹಾಗೂ ಪ್ರಾಣಿ ಪ್ರಪಂಚದ ಕಥನಗಳ ಜಾಡಿನಲ್ಲಿ ನವ್ಯ ಇಲ್ಲಿನ ಕತೆಗಳನ್ನು ಬರೆದಂತೆ ತೋರಿದರೂ ಮನುಷ್ಯನಲ್ಲಿ ನೆಲೆಗೊಂಡಿರುವ ಕ್ರೌರ್ಯ, ದುರಾಸೆ, ಅಪ್ರಮಾಣಿಕತೆ ಮುಂತಾದೆ ಅಪಸವ್ಯಗಳ ಎದುರಿಗೆ ಬಾಲಕರು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವ ಮಾದರಿಯನ್ನು ಇಲ್ಲಿನ ಕತೆಗಳು ನೀಡುತ್ತವೆ.
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ. ಬರಹಗಾರನ ಕಥೆಯ ಭಾವಕ್ಕೆ ಓದುಗನ ಭಾವನೆಗಳು ಹೊಂದಿದ್ದೇ ಆದರೆ ಕಥಾಪ್ರಸವ ಅನುಭವಿಸಿದ ಕಥೆಗಾರನಿಗೂ ನೆಮ್ಮದಿಯ ನಿಟ್ಟುಸಿರು. ರವೀಂದ್ರ ಮುದ್ದಿಯವರ ಸಿನಿಮಾ, ಟಿವಿಗಳಲ್ಲಿ ಇನ್ನೂ ಬಳಕೆಯಾಗದ ಜವಾರಿ ಭಾಷೆಯ ಪದ ಪ್ರಯೋಗ ಮಾತ್ರ ಅದ್ಭುತ. ವರದಾ ತೀರದ ಕತೆಗಳನ್ನು ಓದುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವು ಆಡಿ ಬೆಳೆದ ನಮ್ಮೂರು ಚಿತ್ರಣ ಕಣ್ಮುಂದೆ ಮುಂದೆ ಬರುವುದು ಗ್ಯಾರಂಟಿ.
ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು ಪಿರಮಿಡ್ ಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು, ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು, ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮು೦ದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನೀಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ.
‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ ನಂಬಿಕೆ, ಭರವಸೆ ಆಗಬೇಕಿದ್ದ ಈ ಪ್ರಮಾಣ ಗೌರಿಯ ಪಾಲಿಗೆ ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ
“ಬೇವಾಚ್” ಕತ್ತಲಾಗುತ್ತಿದ್ದಂತೆ ಎಚ್ಚರವಾಗುವ ಲೈವ್ ಬ್ಯಾಂಡಿನ ಝಗಮಗಿಸುವ ಬೆಳಕಿನಡಿಯಲ್ಲಿ, ಕಿವಿಗಡಚಿಕ್ಕುವ ಅಬ್ಬರದ ಹಾಡಿಗೆ ಅರೆಬರೆ ಬಟ್ಟೆತೊಟ್ಟು ಮೈ ಬಳಕಿಸುತ್ತಾ, ಗ್ರಾಹಕರನ್ನು ಕಣ್ಣಲ್ಲೇ ಸೆಳೆಯುವ ಯುವತಿಯೊಬ್ಬಳ ಸುತ್ತ ಹೆಣೆದ ಕಾದಂಬರಿ ಪರಿಸ್ಥಿತಿ ಮತ್ತು ಜವಾಬ್ದಾರಿ ಒಬ್ಬ ಮುಗ್ಧ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ; ಮುಂದೆ, ಬದಲಾಗುವ ಅವಕಾಶ ಇದ್ದರೂ ಹಣದಾಸೆಗೆ ಬಿದ್ದ ಅವಳು ಯಾವ್ಯಾವ ಕುಕೃತ್ಯದಲ್ಲಿ ತೊಡಗಿಕೊಳ್ಳುತ್ತಾಳೆ ಎಂಬುದರ ಜೊತೆಗೆ ಬಡತನ, ಮೋಸ, ವ್ಯಭಿಚಾರ, ಗಂಡು ಮಗುವಿನ ವ್ಯಾಮೋಹ, ಪೊಲೀಸರ ಕ್ರೌರ್ಯ, ಕ್ರೈಂ ಮಿಗಿಲಾಗಿ ಬೆಲೆವೆಣ್ಣುಗಳ ಸಹವಾಸ ಮಾಡುವುದರಿಂದಾಗುವ ಪರಿಣಾಮವನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಕೊರತೆ ನೀಗಿಸಿದ ಕೃತಿ.. ಭಾರತವು ವಿಶ್ವಗುರುವಾಗಿ ಬಿಂಬಿತಗೊಳ್ಳುತ್ತಿರುವ ಇಂದಿನ ಜಾಗತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನನ್ನು ಒಂದು ಸಂಶಯ ಕಾಡತೊಡಗಿತ್ತು. ಇಪ್ಪತ್ತೊಂದನೇ ಶತಮಾನ ಪ್ರಾರಂಭವಾದ ಮೇಲೆ ಜನಿಸಿದ ಮಕ್ಕಳನ್ನು ಮತ್ತು ಎಳೆವಯಸ್ಕರನ್ನು ಈ ಬೆಳವಣಿಗೆಯ ಔಚಿತ್ಯ ಹಾಗೂ ಸೂಚ್ಯಾರ್ಥ ಮತ್ತು, ಆ ಅರ್ಹತೆ ಗಳಿಸಲು ಅಳತೆಗೋಲು ಏನಿರಬಹುದು ಎಂಬ ಬಗ್ಗೆ ಪ್ರಶ್ನಿಸಿದರೆ ಅವರಲ್ಲಿ ಸೂಕ್ತ ಉತ್ತರ ಇದ್ದೀತೆ ಎಂಬ ಸಂಶಯ. ಆ ಸಂಶಯದ ಬೆನ್ನಲ್ಲಿಯೇ ಕಂಡ ಒಂದು ಕೊರತೆ ಎಂದರೆ ನಮ್ಮ ಮಕ್ಕಳಲ್ಲಿ ಈ ವಿಚಾರಗಳ ಬಗ್ಗೆ ತಿಳಿಹೇಳುವ, ನಮ್ಮ ದೇಶದ ಹಲವು ಬೋಧಕರ, ಧಾರ್ಮಿಕ ಮತ್ತು ಆಧ್ಯಾತ್ಮ ಪ್ರವರ್ತಕರ ಮುಖ್ಯ ಬೋಧನೆಗಳನ್ನು, ಅವರ ವೈಚಾರಿಕತೆಯ ವ್ಯಾಪ್ತಿಯನ್ನು, ಸರಳಭಾಷೆಯಲ್ಲಿ ಒಂದೆಡೆ ಕಟ್ಟಿಕೊಡುವ ಪ್ರಕಟಣೆಗಳ ಅಭಾವ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪ್ರಭು ಅವರು 'ಬಹುತ್ವ ಭಾರತ ಕಟ್ಟಿದವರು' ಪುಸ್ತಕದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಾಗ, ಅಲ್ಲಿನ ಹನ್ನೊಂದೂ ಜೀವನ್ಮುಕ್ತರ ಬಗ್ಗೆ ಓದುತ್ತಿದ್ದಂತೆ, ಒಂದು ತೃಪ್ತಬಾವ ಮೂಡತೊಡಗಿತ್ತು. ನನ್ನಲ್ಲಿ ಮೂಡಿದ್ದ ಕೊರತೆಯ ಭಾವವನ್ನು ನೀಗಿಸಿದ್ದಾರೆ ಎನಿಸಿತ್ತು. ವಾಲ್ಮೀಕಿ, ಬುದ್ದ ಮೊದಲಾಗಿ, ಬಸವಣ್ಣ, ಅಲ್ಲಮ, ಅಕ್ಕಮ್ಮನವರ ಮೂಲಕ ಹಾದು, ಸರ್ವಜ್ಞ, ಶಾರಾದಾದೇವಿ, ವಿವೇಕಾನಂದ.. ಕೊನೆಗೆ ಜಿಡ್ಡು, ನಾರಾಯಣ ಗುರು ಮತ್ತು ದಲೈ ಲಾಮವರೆಗೆ, ಭಾರತದ ಹನ್ನೊಂದು ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಜೀವನವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಕಥಾನಕದಂತೆ ರಚಿಸಿರುವುದು ವಿಶೇಷವಾದ ನೆಮ್ಮದಿ ತಂದಿದೆ. ಎಲ್ಲರ ಮನೆಯ ಗ್ರಂಥಭಂಡಾರದಲ್ಲೂ ಎಲ್ಲರ ಕೈಗೂ ಸದಾ ಎಟುಕುವಂತೆ ಇರಬೇಕಾದ ಕೃತಿ ಇದು. - ಕೆ ಎನ್ ಗಣೇಶಯ್ಯ
ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ ಶಿಕ್ಷಕವರ್ಗವೇ ಓದಿನಿಂದ ವಿಮುಖರಾಗಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ನಡುವೆ ಓದು ಅಂಕಗಳಿಕೆಗೆ ಮಾತ್ರ ಬಳಕೆಯಾಗುತ್ತಿರುವುದು ಹೊಸ ಸಂಗತಿ ಏನಲ್ಲ. ದೇಶದ ಪಿತಾಮಹರಂತಹ ದೊಡ್ಡ ಪ್ರಶ್ನೆಗಳನ್ನು ಬಿಡಿ, ದೇಶದ ರಾಷ್ಟ್ರಪತಿ, ರಾಜ್ಯಪಾಲರು ಯಾರೆಂಬುದು ಗೊತ್ತಾಗದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಶಾಲೆ, ಶಿಕ್ಷಕಿ ಮತ್ತವರ ದಿನಚರಿ ತುಸು ವಿಭಿನ್ನ ಮತ್ತು ಮಾದರಿಯಂತಿದೆ. ಚೂರು ಹೊಸ ಭರವಸೆಯನ್ನು ಮೂಡಿಸುತ್ತಿದೆ.
ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.
ಇದೊಂದು ಮಹತ್ವದ ಕೃತಿ. ಕಗ್ಗಗಳ ಕುರಿತಾಗಿ ವ್ಯಾಖ್ಯಾನ ಹೊಸದೇನಲ್ಲ. ಆದರೆ ಆ ಕಗ್ಗದ ಸಾರವನ್ನು ಒಂದು ಪುಟ್ಟ ಕಥೆಯ ಮೂಲಕ ಹೇಳುವ ಪ್ರಯತ್ನ ಮಾತ್ರ ಹೊಚ್ಚಹೊಸದು. ವಿ. ಗೋಪುಕುಮಾರ್ ಅವರು ನ್ಯಾನೋ ಕಥಾಪ್ರಕಾರದ ನಿಷ್ಠರು ಮತ್ತು ಶ್ರೇಷ್ಠರೂ ಕೂಡ. ನಾನವರ ಕಥೆಗಳನ್ನು ಒಂದೇ ಉಸಿರಿನಲ್ಲಿ ಓದಿದ್ದೆ. ಹಾಗೆ ಓದಿಸಿಕೊಳ್ಳುವ ಗುಣ ಅವರ ಕಥೆಗಳಿಗಿದೆ.
ಕಥಾಸಂಕ್ರಾಂತಿ2024 ಕಥಾಸಂಕಲನದಲ್ಲಿ ಮೂರು ಬಹುಮಾನಿತ ಕಥೆಗಳು ಹಾಗೂ ಏಳು ಮೆಚ್ಚುಗೆ ಪಡೆದ ಕಥೆಗಳು ಇವೆ. ಇಲ್ಲಿನ ಪ್ರತಿ ಕಥೆಯೂ ವಿಶಿಷ್ಟ, ವಿಭಿನ್ನ, ಪ್ರಯೋಗಶೀಲತೆ, ಭಾಷಾ ಬಳಕೆ, ಕಥಾವಸ್ತುವಿನ ಆಯ್ಕೆಯಲ್ಲಿ ತೋರಿರುವ ವೈವಿಧ್ಯತೆ, ಕಥಾವಿನ್ಯಾಸ, ನಿರೂಪಣಾ ಕುಶಲತೆ ಹೀಗೆ ಎಲ್ಲದರಲ್ಲಿಯೂ ಈ ಕಥೆಗಳು ತಟ್ಟನೆ ಗಮನ ಸೆಳೆಯುತ್ತವೆ. ಸಮಕಾಲೀನ ವಿಷಯ, ಗ್ರಾಮೀಣ ಸಮಾಜದ ಬದುಕಿನಲ್ಲಿ ಇಣುಕುವ ಚಲನಶೀಲತೆ, ಮನುಷ್ಯರ ಸಂಕಟಗಳು, ಸಂದಿಗ್ಧತೆಗೆ ಸಿಲುಕಿಸುವ ಪ್ರೇಮ, ಬದುಕಿನ ಹೋರಾಟದಲ್ಲಿ ಗೆಲುವು ಸಾಧಿಸಲು ಕಂಡುಕೊಳ್ಳುವ ಹೊಸ ದಾರಿಗಳು, ಮುಗ್ಧ ಬಾಲಕಿಯರು ಎದುರಿಸಬೇಕಾದ ತಲ್ಲಣಗಳು, ಭಾಷೆಯೊಂದಿಗೆ ಬದುಕುವ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಬಗೆ... ಈ ಕಥೆಗಳಲ್ಲಿ ಅಡಕವಾಗಿವೆ. ಕಥಾಸ್ಪರ್ಧೆಗೆ ಬಂದ ನೂರಾರು ಕಥೆಗಳನ್ನು ಹಲವು ವಿಧದಲ್ಲಿ ಜರಡಿ ಹಿಡಿದು ಅಂತಿಮ ಸುತ್ತಿನಲ್ಲಿ ಆಯ್ದ ಐವತ್ತು ಕಥೆಗಳಲ್ಲಿ ಕೊನೆಗುಳಿದ ಹತ್ತು ಕಥೆಗಳು ಕನ್ನಡದ ಲೇಖಕರು ಕಥಾಪ್ರಕಾರದಲ್ಲಿ ತುಳಿಯುತ್ತಿರುವ ಹೊಸ ದಾರಿಗಳನ್ನು, ಹೊಸ ಲೇಖಕರ ಮನೋಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.
ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು. 2000ದ ಸುಮಾರಿಗೆ ಸಿನಿಮಾ ವ್ಯಾಖ್ಯಾನದಲ್ಲಿ ಬಹಳ ಬದಲಾವಣೆ ಆಗಿತ್ತು. ಸಿನಿಮಾ ವಿಶ್ಲೇಷಣೆಯಲ್ಲಿ 'ಬಿಂಬ'ದ ಜೊತೆಗೆ 'ಬಿಂಬನ'ವನ್ನೂ ಒಂದು ಮೌಲ್ಯವಾಗಿ ಪರಿಗಣಿಸತೊಡಗಿದರು. ತೆರೆಯ ಮೇಲೆ ಕಾಣುವುದು ಬಿಂಬಗಳಾದರೆ ಅವನ್ನು ಸೃಷ್ಟಿ ಮಾಡಲು ಆಯ್ದುಕೊಳ್ಳುವ ತಾಂತ್ರಿಕ ಅಂಶಗಳು ಬಿಂಬನವನ್ನು ಸೂಚಿಸುತ್ತವೆ. ಸಿನಿಮಾದ ಬಿಂಬಗಳು ಅಲಿಪ್ತವಲ್ಲ, ಅವು ಯಂತ್ರಜನ್ಯವಾದರೂ ಅವನ್ನು ಸೃಷ್ಟಿ ಮಾಡುತ್ತಿರುವವರ ಇಷ್ಟಾನಿಷ್ಟಗಳು ಬಿಂಬಗಳಲ್ಲಿ ಹಾಗೂ ಬಿಂಬನ ಕ್ರಮದಲ್ಲಿ ವ್ಯಕ್ತವಾಗುತ್ತಾ ಇರುತ್ತವೆ. ಟೆಕ್ನಾಲಜಿಯ ಬಗ್ಗೆ ಮನುಷ್ಯನಿಗೆ ಯಾವಾಗಲೂ ಸೆಳೆತ, ಕುತೂಹಲ ಮತ್ತು ಭಯ ಇದ್ದೇ ಇರುತ್ತದೆ. ಸೆಳೆತಕ್ಕೆ ಕಾರಣ ಅದು ತನ್ನ ಬದುಕನ್ನು ಇನ್ನಷ್ಟು ಸುಂದರಮಾಡುತ್ತದೆ ಎನ್ನುವ ಭ್ರಮೆ, ತನಗೆ ಅಸಾಧ್ಯ, ನಿಗೂಢ ಎನಿಸಿದ್ದನ್ನು ಅದು ಸಾಧ್ಯ ಮಾಡಿಕೊಡುತ್ತಾದ್ದರಿಂದ ಕುತೂಹಲ, ಅದರ ಸ್ವರೂಪ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವಾದ್ದರಿಂದ ಭಯ-ಈ ಮೂರು ಭಾವನೆಗಳು ಬೇರೆ ಬೇರೆಯಾಗಿ ಅಥವಾ ಒಟ್ಟಾಗಿಯೇ ಕೂಡಿ ಅನಿರ್ವಚನೀಯ ಅನುಭವವೊಂದನ್ನು ನೀಡುತ್ತಿರುತ್ತದೆ.
ಆರೋಗ್ಯಪೂರ್ಣ ದೀರ್ಘಾಯುಷ್ಯದ ಬಯಕೆ ನಿಮಗಿದೆಯೇ? ಪ್ರಾಣಾಯಾಮ, ಯೋಗಾಸನಗಳನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಎಂದು ತಿಳಿಯಬೇಕೆ? ಯಾವುದೇ ತರಗತಿಗಳಿಗೆ ಅಥವಾ ಶಿಬಿರಗಳಿಗೆ ಹೋಗದೆ ಧ್ಯಾನವನ್ನು ಮನೆಯಲ್ಲಿಯೇ ಅಭ್ಯಾಸ ಮಾಡಲು ಸರಳಸೂತ್ರಗಳು ಬೇಕೆ? ಯಾವ ರೀತಿಯ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿದುಕೊಳ್ಳಬೇಕೆ? ಉತ್ತಮ ಆರೋಗ್ಯಕ್ಕಾಗಿ ನೆಮ್ಮದಿ ಮತ್ತು ಮನಃಶಾಂತಿ ಎಷ್ಟು ಮುಖ್ಯ ಮತ್ತು ಅದಕ್ಕಾಗಿ ಯಾವೆಲ್ಲಾ ಜೀವನ ಸಿದ್ಧಾಂತಗಳನ್ನು ಮತ್ತು ಜೀವನಶೈಲಿಯನ್ನು ರೂಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕಿದೆಯೇ? ಹಾಗಿದ್ದಲ್ಲಿ, ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಮತ್ತು ಬಯಕೆಗಳಿಗೆ "ಸಹಜ ಜೀವನ"ದಲ್ಲಿ ಉತ್ತರಗಳಿವೆ, ಸುಲಭ ಮಾರ್ಗೋಪಾಯಗಳಿವೆ. ತಮ್ಮ ಹಲವಾರು ವರ್ಷಗಳ ಪ್ರಯೋಗ, ಅಭ್ಯಾಸ, ಓದು, ಅಧ್ಯಯನಗಳ ಸ್ವಾನುಭವದಿಂದ, ವೈಚಾರಿಕ ಚಿಂತನೆಗಳನ್ನಾಧರಿಸಿ ಮತ್ತು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಅರಿವಿನ ಬೆಳಕಿನಲ್ಲಿ ಲೇಖಕ ಮತ್ತು ರಾಜಕಾರಣಿ ರವಿ ಕೃಷ್ಣಾರೆಡ್ಡಿ ಸರಳಗನ್ನಡದಲ್ಲಿ ಬರೆದಿರುವ ಕೈಪಿಡಿ - "ಸಹಜ ಜೀವನ".
ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷಣರಾವ್ ಸದ್ಯ ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖಿಕೆ, ಅಂತಃಪ್ರಶ್ನೆ, ಪ್ರಜ್ಞಾಪ್ರವಾಹತಂತ್ರ ಇದೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ. ಲಕ್ಷಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀವ್ರತೆ ಮತ್ತು ಹೊಸದೃಷ್ಟಿ ಲಕ್ಷಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ: ಶಕ್ತಿಯೂ ಆಗಿದೆ.
...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ. ...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ ಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ, ಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ.. -ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಡಾ. ಟಿ.ಎಸ್. ವಿವೇಕಾನಂದ.. ಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ', ತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾರ್ ಈ ಪ್ರಯತ್ನದ ಜೊತೆಗಾರ. -ಪ್ರೊ. ಕಿ.ರಂ. ನಾಗರಾಜ,
...ಬೇಟೆಯನ್ನು ಒಂದು ಕಾಯಕ ಪ್ರಜ್ಞೆಯಲ್ಲಿ ಬಾಳಿದ ಕಾರ್ಬೆಟ್ ನ ಅರಣ್ಯ ಪ್ರೀತಿ ಇರುವೆಂಭತ್ತು ಕೋಟಿ ಜೀವರಾಶಿಗಳನ್ನೂ ಅವುಗಳ ಬದುಕುವ ಹಕ್ಕನ್ನೂ ಮಾನ್ಯ ಮಾಡುವ ಗುಣಗೌರವದಿಂದ ಕೂಡಿದ್ದು.... ಪ್ರತಿಯೊಂದು ನರಭಕ್ಷಕ ಹುಲಿಯನ್ನು ಬೇಟೆಯಾಡಿದಾಗಲೂ ಆದ ಅನುಭವ ವಿವರಗಳನ್ನು ಕಟ್ಟಿಕೊಡುವಾಗ ಅವರು ವಿವರಿಸುವ ಕಾಡಿನ ಬಗೆ ವಿನ್ಯಾಸ ಅವರ ನೆನಪಿನ ತೀಕ್ಷ್ಣತೆಗೆ ಗ್ರಹಿಕೆಯ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ಮೃತ್ಯು ಎದುರಿಗೇ ನಿಂತಾಗಲೂ ಧೃತಿಗೆಡದ ಅವರ ಆತ್ಮವಿಶ್ವಾಸದ ನಿಲುಮೆ ಅನನ್ಯವಾದುದು. ಇದೆಲ್ಲವನ್ನೂ ಅವರ ಬರಹ ತನ್ನ ಎದೆಯಲ್ಲಿ ತುಂಬಿಕೊಂಡಿದೆ. ಯಾವ ಜೀವ ವಿಜ್ಞಾನವೂ ತಿಳಿಸಲಾರದ ಎಷ್ಟೋ ಸೂಕ್ಷ್ಮಾತಿ ಸೂಕ್ಷ್ಮ ವಿಷಯಜ್ಞಾನವನ್ನು ಅನುಭವ ಮಾತ್ರದಿಂದ ಪಡೆದವರಾದ ಕಾರ್ಬೆಟ್ ಒಂದು ಅದ್ಭುತ, ಬೇಟೆಯನ್ನು ನಿಸರ್ಗಧರ್ಮಕ್ಕೆ ಎರವಾಗದ ನಡೆಯಲ್ಲಿ ಜೀವ ಸಂರಕ್ಷಕ ವಿಧಿಯಂತೆ ಪರಿಪಾಲಿಸಿದ ಮಹಾನುಭಾವ ಕಾರ್ಬೆಟ್. ...ಇಂಥ ಬೇಟೆಯ ಸಂತನ ಅನುಭವ ಕಥನವನ್ನು ಓದಿದ್ದೇ ನನ್ನ ಅಕ್ಷರಜ್ಞಾನದ ಅದೃಷ್ಟಭಾಗ್ಯವೆಂದು ನನ್ನ ತಿಳಿವು ಹೇಳುತ್ತಿದೆ. ಹಿಮಾಲಯದ ನರಭಕ್ಷಕಗಳು ...ಗೆಳೆಯ ವಿವೇಕಾನಂದನಿಗೆ ಆತ್ಮೀಯ ಕೃತಜ್ಞತೆಗಳು, ಕಾರಣ ಇಷ್ಟು ವಿಸ್ತಾರವಾದ ಈ ಬರಹವನ್ನು ಧ್ಯಾನಸ್ಥಿತಿಯ ಬದ್ಧತೆಯಲ್ಲಿ ಒಳಕ್ಕೆ ತಗೆದುಕೊಂಡು ಅದನ್ನು ಕನ್ನಡೀಕರಿಸಿದ್ದಕ್ಕೆ. ಇದನ್ನು ಕೇವಲ ಅನುವಾದ ಎಂದು ಹೇಳಿದರೆ ಅಪಚಾರವಾಗುತ್ತದೆ. ಕನ್ನಡ ಭಾಷೆಯ ಜಾಯಮಾನಕ್ಕೆ ಕಿಂಚಿತ್ತೂ ಊನವಾಗದ ಪ್ರಜ್ಞೆಯಲ್ಲಿ ಕಾರ್ಬೆಟ್‌ನ ಅನುಭವವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಈ ಕಾರ್ಯ ಗುರುತರವಾದ ಹೊಣೆಗಾರಿಕೆಯಿಂದ ಮಾಡಿದ ಫಲವೇ ಸರಿ. ಈ ಜೀವಲೋಕದ ಬಗೆಗೆ ಕಾರ್ಬೆಟ್ ಪ್ರಜ್ಞೆಯನ್ನು ಬೆಳೆಸಿಕೊಂಡ ಮನಸ್ಸು ಮಾತ್ರ ಇಂಥ ಸಾಹಸಕ್ಕೆ ಶ್ರದ್ದೆ ಗೌರವಗಳಿಂದ ತೊಡಗುತ್ತದೆ.
nil
ಕಾದಂಬರಿಯಲ್ಲಿ ಆದರ್ಶ ಶಿಕ್ಷಕನಾಗಿರುವ ತಂದೆಯ ಮೌಲ್ಯಗಳು ಒಂದೆಡೆಯಾದರೆ, ಅದೇ ದಾರಿಯಲ್ಲಿ ನಡೆದುಬಂದ ಮಗನ ವ್ಯಾಪಾರಿಕ ಆಲೋಚನೆಗಳು ಬೇರೆಯಾಗಿರುತ್ತವೆ. ಇಬ್ಬರು ಬದುಕಿನಲ್ಲಿ ಆರಿಸಿಕೊಂಡ ದಾರಿ ಒಂದೇಯಾದರೂ.. ನೋಡುವ ದೃಷ್ಟಿಕೋನಗಳು ಬೇರೆ ಬೇರೆ. ಇದು ಬರಿ ಅಪ್ಪ ಮಗನ ಕತೆ ಅಲ್ಲ, ಎರಡು ತಲೆಮಾರುಗಳ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕತೆ.
Showing 1 to 30 of 51 results