nil
ಯುದ್ಧ ಎನ್ನುವ ಪದ ಬಹಳ ಶಕ್ತಿಶಾಲಿ. ಅದೇ ಸಮಯದಲ್ಲಿ ಅದು ಭಯವನ್ನು ಸಹ ಹುಟ್ಟಿಸುತ್ತದೆ. ಪೂರ್ಣ ಪ್ರಮಾಣದ ಯುದ್ಧವನ್ನು ಇಂದು ಜಗತ್ತಿನ ಯಾವ ದೇಶವೂ ಭರಿಸುವ ಶಕ್ತಿಯನ್ನು ಹೊಂದಿಲ್ಲ. ಯುದ್ಧ ಅಭಿವೃದ್ಧಿಯ, ಸಿರಿವಂತಿಕೆಯ ಶತ್ರು. ಆದರೂ ಕೆಲವೊಮ್ಮೆ ಕೆಲವು ಸಂಘರ್ಷಗಳು ಅನಿವಾರ್ಯ. ಕೆಲವು ಬಾರಿ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕಲು ಇಂತಹ ಸಂಘರ್ಷಗಳ ಅವಶ್ಯಕತೆ ಇರುತ್ತದೆ. ಭಾರತ ಎಂದಿಗೂ ಕಾಲು ಕೆರೆದು ಜಗಳಕ್ಕೆ ಹೋದ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಈ ಬಾರಿಯ ಇಂಡೋ ಪಾಕ್ ಯುದ್ಧಕ್ಕೂ, ಪಾಕಿಸ್ತಾನ ಕಾರಣ ಎನ್ನುವುದು ಸ್ಪಷ್ಟ. ನಾವು ಅವರ ಉದ್ಧಟತನಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ. ಇಂತಹ ಘಟನೆಯನ್ನು ಹದಿನೈದು ದಿನಗಳ ಕಾಲ ನೇರವಾಗಿ ನೋಡಿ, ಅನುಭವಿಸಿ ಅದನ್ನು ಅಕ್ಷರಕ್ಕೆ ಇಳಿಸಿದ್ದಾರೆ ಅಭಿಷೇಕ್. ಹದಿನೈದು ದಿನದ ಘಟನಾವಳಿಗಳ ಅನುಭವ ಕಥನ, ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು. ಇಲ್ಲಿನ ಬರಹ, ಭಾಷೆ ನೇರವಾಗಿ ಹೃದಯಕ್ಕೆ ನಾಟುತ್ತದೆ. ನಾವೇ ವಾರ್ ಫೀಲ್ಡ್ ನಲ್ಲಿದ್ದೇವೆ ಎನ್ನಿಸುತ್ತದೆ. - ರಂಗಸ್ವಾಮಿ ಮೂಕನಹಳ್ಳಿ ಲೇಖಕರು, ಆರ್ಥಿಕ ತಜ್ಞರು
ಬದುಕಿನ ಪ್ರತಿ ಕ್ಷಣವೂ ಸಿಹಿಯಾಗಿಯೇ ಇರುವುದಿಲ್ಲ. ಆದರೆ ಕಹಿಯಲ್ಲೂ ಸಿಹಿಯನ್ನು ಹುಡುಕುವುದರಲ್ಲೇ ಜೀವವೂ, ಜೀವನವೂ ಆಡಗಿದೆ. ಪ್ರತಿ ಸೂರ್ಯೋದಯಕ್ಕೂ ಹೊಸ ಬದುಕಿನ ಉದಯವಾಗುತ್ತದೆ. ಆ ಒಂದು ದಿನದ ಪ್ರತಿ ಕ್ಷಣವನ್ನು ನವೋಲ್ಲಾಸದಿಂದ ಕಳೆಯಬೇಕು ಅಂದರೆ ಸೂರ್ತಿ ಎಲ್ಲಿಂದ ಬರುತ್ತದೆ? ಯಾರು ಚೈತನ್ಯ ಕೊಡುತ್ತಾರೆ ಅಂತಲ್ಲ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗೆ ಇರುವ ಧನಾತ್ಮಕ ಶಕ್ತಿಯನ್ನು ಪ್ರಚೋದಿಸಿಕೊಳ್ಳಬೇಕಷ್ಟೆ. ಸಣ್ಣ ಸಣ್ಣ ಸಂಭ್ರಮವೇ ಇಡೀ ದಿನವನ್ನು ನಿರಾಳವಾಗಿಸುತ್ತದೆ. ಮುಂಜಾವಿಗೆ ಅರಳಿದ ಹೂವಿನಲ್ಲೋ, ಪಕ್ಷಿಯ ಕೂಗಿನಲ್ಲೋ ಅಥವಾ ಇನ್ಯಾರದ್ದೋ ಮಾತು, ನಗುವಿಗೂ ನಿಮ್ಮನ್ನು ಖುಷಿಯಾಗಿ ಇಡುವ ಶಕ್ತಿ ಇದೆ ಅಂತಾದರೆ ಎದುರಾಗುವ ಯಾವ ಕ್ಷಣವನ್ನು ನಿರ್ಲಕ್ಷಿಸಬೇಡಿ, ಆಸ್ವಾದಿಸಿ ಎನ್ನುತ್ತವೆ ಹಲವರ ಬದುಕಿನಲ್ಲಿ ನಡೆದು ಹೋದ ದುರಂತ, ಯಾರದ್ದೋ ಹೋರಾಟ, ಮತ್ತೆಮತ್ತೆ ಸೋತು ಗೆದ್ದವರ ಈ ಕಥೆಗಳು. 'ಬರೆದು ಬದುಕು ಬದಲಿಸಿ' ಶೀರ್ಷಿಕೆಯಡಿ ವಿಜಯ ಕರ್ನಾಟಕ - ಸ್ನೇಹ ಬುಕ್ ಹೌಸ್ ಆಯೋಜಿಸಿದ್ದ ಯುಗಾದಿ ಲೇಖನ ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ 25 ಲೇಖನಗಳ ಈ ಸಂಕಲನ ಓದಿದಾಕ್ಷಣ ನಿಮ್ಮ ಮನವೂ ಸಕಾರಾತ್ಮಕ ಭಾವದಿಂದ ಹೊಳಪುಗೊಳ್ಳದಿದ್ದರೆ ಹೇಳಿ...
ಲೇಖಕಿ ಅನುಸೂಯ ಯತೀಶ್ ಬಹಳ ಕಕ್ಕುಲತೆಯ ಹೆಣ್ಣು ಮಗಳು ಮತ್ತು ಬಹಳ ಜವಾಬ್ದಾರಿಯುತ ಶಿಕ್ಷಕಿ ಹಾಗೂ ಗೃಹಿಣಿ. ಅವರ ತಾಯಿಯಂತಹ ಅಂತಃಕರಣಕ್ಕೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ಅವರು ಕಲಿಸುತ್ತಿರುವ ಶಾಲೆಯ ಮಕ್ಕಳು ಇಬ್ಬರೂ ಸಮಾನ ಹಕ್ಕುದಾರರು. ಶಿಕ್ಷಕಿ ಯಾರು, ತಾಯಿ ಯಾರು ಎಂದು ಗೆರೆ ಎಳೆಯಲಾಗದಷ್ಟು ಮಮತೆಯ ಜೀವ ಅವರದು. ಅವರು ಕಲಿಸುವ ಶಾಲೆಯ ಮಕ್ಕಳ ಜೊತೆಗಿನ ಒಡನಾಟವನ್ನು ಒಮ್ಮೊಮ್ಮೆ ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ಕೇಳಿದ ನನಗೆ ಈ ಟೀಚರೊಳಗಿನ ತಾಯಿ ಜೀವದ ಪರಿಚಯವಾಗಿತ್ತು. ಈ ಅನುಪಮವಾದ ಅನುಭವ ಶಾಲೆಯನ್ನು ಬರಿಯ ಮಾತಲ್ಲಿ ಮುಗಿಸಬೇಡಿ. ಸರಣಿಯ ರೂಪದಲ್ಲಿ ಬರೆಯಿರಿ ಎಂದು ಕುಮ್ಮಕ್ಕು ನೀಡಿದ್ದೆ. ಆಗ ನಮ್ಮ `ಕೆಂಡಸಂಪಿಗೆ' ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನನಗೇ ಅಚ್ಚರಿಯಾಗುವಂತೆ ಬಹಳ ಮನೋಜ್ಞವಾಗಿ ಬರೆದೇ ಬಿಟ್ಟರು. ಇವರ ಈ ಬರಹ ನನಗೇನೂ ಆಶ್ಚರ್ಯ ಉಂಟು ಮಾಡಲಿಲ್ಲ. ಏಕೆಂದರೆ ಪಕ್ಕಾ ತಾಯಿ ಹೃದಯದ ಅನುಸೂಯರಂತಹ ಬರಹಗಾರ್ತಿಯೊಬ್ಬಳು ರೂಢಿಗತವಾದ ಸಿದ್ಧಮಾದರಿಯ ಅಕಾಡೆಮಿಕ್ ನಡೆಗಳನ್ನು ಕಿತ್ತು ಬಿಸಾಕಿ ಅಂತಃಕರಣದ ಅನುಭವ ಜನ್ಯವಾದ ಗದ್ಯವನ್ನು ಬರೆದರೆ ಅದು ಹೃದಯ ಸ್ಪರ್ಶಿಯ ಅಮೂಲ್ಯವೂ ಆಗಬಲ್ಲದೆಂದು ನನಗೆ ಗೊತ್ತಿತ್ತು. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗಟ್ಟಲೆ ಸೊನ್ನೆಗಳನ್ನು ತುಂಬುವುದರಿಂದ ಹಿಡಿದು ಮಂಜುನಾಥ ಎಂಬ ಹೂ ಹೃದಯದ ಬಾಲಕನ ಕಥಾನಕದವರೆಗಿನ ವಿವರಗಳು ಈ ಅನುಸೂಯ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ. ಅನುಸೂಯ ಅವರಿಗೆ ಅಭಿನಂದನೆಗಳು.
Showing 151 to 180 of 187 results