nil
ಪ್ರತಿ ನಲ್ವತ್ತು ಸೆಕೆಂಡಿಗೆ ಜಗತ್ತಿನಲ್ಲಿ ಒಂದು ಆತ್ಮಹತ್ಯೆ. ಹದಿಹರೆಯದವರು ಹಾಗೂ ಯುವಜನತೆ ಸಾವಿಗೆ ಒಂದು ಪ್ರಮುಖ ಕಾರಣ ಆತ್ಮಹತ್ಯೆ. ಕುಟುಂಬ ಹಾಗೂ ಸಮಾಜದ ಮೇಲೆ ಆತ್ಮಹತ್ಯೆ ಬೀರುವ ಮಾನಸಿಕ, ಸಾಮಾಜಿಕ, ಆರ್ಥಿಕ ಪರಿಣಾಮ ಅನೂಹ್ಯ ಅಗಣಿತ. ಭಾರತದಲ್ಲಿ ವರ್ಷಂಪ್ರತಿ ಒಂದು ಲಕ್ಷಕ್ಕೂ ಮೀರಿ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಇಪ್ಪತ್ತು ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ. ಅಂದರೆ ಇಪ್ಪತ್ತು ಲಕ್ಷ ಮಂದಿ ಅಪರಾಧಿ ಪ್ರಜ್ಞೆ. ಪಾಪಪ್ರಜ್ಞೆಯಿಂದ ನರಳುತ್ತಾರೆ. ಪರೀಕ್ಷೆಯ ಒತ್ತಡ, ಪ್ರೇಮಭಂಗ, ಪಾಲಕರ ಮಿತಿಮೀರಿದ ಮಹತ್ವಾಕಾಂಕ್ಷೆ. ಅತಿಯಾದ ನಿರೀಕ್ಷೆಗಳು, ಅಸಾಮರ್ಥ್ಯ, ಅದಕ್ಷತೆ, ಒಂಟಿತನ, ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ತೀವ್ರವಾದ ಕೊರಗು, ಆರ್ಥಿಕ ಸಂಕಷ್ಟಗಳು, ತಿರಸ್ಕಾರ, ತಾತ್ಸಾರ, ಅಪಮಾನ ಮೊದಲಾದ ಕಾರಣಗಳಿಂದ ಆತ್ಮಹತ್ಯೆಗಳಾಗುತ್ತಿವೆ. ಮಹಡಿ ಏರಿ ಹಾರುವುದು, ಅಣೆಕಟ್ಟೆಯಿಂದ ಧುಮುಕುವುದು. ರೈಲಿಗೆ ತಲೆ ಕೊಡುವುದು ಯಾವ ಸಮಸ್ಯೆಗೂ ಪರಿಹಾರವಲ್ಲ. ಸತ್ತ ಮಾತ್ರಕ್ಕೆ ಸಮಸ್ಯೆಗಳು ಮುಗಿಯುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ. ಸುತ್ತಲೂ ನೋಡಿದರೆ ಸಹಾಯಹಸ್ತ ಗೋಚರಿಸುತ್ತದೆ. ಕಣ್ಣೀರು ಒರೆಸುವ ಬೆರಳು ಕಾಣುತ್ತದೆ. ಸಾಂತ್ವನದ ಕೊರಳು ಕೇಳುತ್ತದೆ. ಸಹಾಯ ಬಯಸಿ, ಸಹಾಯ ಮಾಡಿ ಮುಂದಾಗುವ ಅನಾಹುತ ತಪ್ಪಿಸಿ: ಜೀವ ಉಳಿಸಿ ಎಂಬುದೇ ಈ ಕೃತಿಯ ಸಾರ. ನಾಡಿನ ಖ್ಯಾತ ಮನೋವಿಜ್ಞಾನ ಹಾಗೂ ಶಿಕ್ಷಣ ಲೇಖಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯ ಕರ್ತೃ.
#