ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ.. ಇವೆಲ್ಲಕ್ಕಿಂತ ಮೀರಿದ ಒಂದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?
ರವೀಂದ್ರ ವೆಂಶಿಯವರ ಲೈಫ್ ಸಖತಾಗಿತ್ತು ಕಣ್ರೀ ಪುಸ್ತಕದಲ್ಲಿನ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯದ ಹಲವಾರು ಘಟನೆಗಳು ನೆನಪಾದದ್ದು ಸತ್ಯ. ಓದುವಾಗ ನನಗೆ ಇದು ಕಥೆಯಾ..? ಆತ್ಮಚರಿತ್ರೆಯಾ..? ಸುಲಲಿತ ಪ್ರಬಂಧವಾ..? ಎನ್ನುವ ಪ್ರಶ್ನೆ ಕಾಡುತ್ತಲೇ ಓದಿಸಿಕೊಂಡಿತು. ಓದಿಯಾದ ಮೇಲೆ ನನಗನ್ನಿಸಿದ್ದು ಇದು ಎಲ್ಲವೂ ಹೌದು ಎಂದು. ಭಾಗ-1ರಲ್ಲಿನ ಬರಹಗಳಲ್ಲಿ ತಿಳಿ ಹಾಸ್ಯದ ಮೂಲಕ ಘಟನೆಗಳನ್ನು ಕಟ್ಟಿಕೊಡುತ್ತಾ ನಿಧಾನಕ್ಕೆ ನಮ್ಮನ್ನು ಬರಹದೊಳಕ್ಕೆ ಸೆಳೆದುಕೊಂಡು ಬಿಡುತ್ತಾರೆ ಲೇಖಕರು. ಇಸ್ತ್ರೀಪೆಟ್ಟಿಗೆಯ ಪ್ರಸಂಗ, ಹೇರ್ ಕಟ್ ಸುತ್ತಲಿನ ವೃತ್ತಾಂತಗಳು, ಸಿನಿಮಾಗಳನ್ನು ಟೆಂಟ್ ನಲ್ಲಿ ನೋಡುವ ಸೊಬಗು - ಇವುಗಳನ್ನು ಲಘುಹಾಸ್ಯಮಯವಾಗಿ ಬರೆಯುತ್ತಾ, ಕಲಿಸಿದ್ದು ಕಲಿತದ್ದು ಲೇಖನದ ಮೂಲಕ ಚಿಂತನೆಗೆ ದೂಡುತ್ತಾರೆ. ಭಾಗ-2 ರಲ್ಲಿ ಕತೆಗಳ ಸ್ವರೂಪದಲ್ಲಿ ಬದುಕನ್ನು ತೆರೆದಿಡುತ್ತಾರೆ. ಒಂದೊಂದು ಕತೆಯೂ ಬೇರೆ ಬೇರೆಯದೇ ಆದ ದ್ರವ್ಯ, ನಿರೂಪಣೆ ಮತ್ತು ಭಾಷೆಯನ್ನು ಹೊಂದಿರುವುದು ರವೀಂದ್ರ ವೆಂಶಿಯವರ ವಿಶೇಷವೆನಿಸುವ ವಸ್ತುಗ್ರಹಿಕೆ ಮತ್ತು ಕತೆಯ ಕಟ್ಟುವಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಸರಳವಾದ, ಅರ್ಥಪೂರ್ಣವಾದ, ನಮ್ಮದೇ ಬದುಕಿನ ಸನ್ನಿವೇಶಗಳು ಎನ್ನುವ ಆತ್ಮೀಯತೆ ಬೆಳೆಸುವ ಬರವಣಿಗೆಯ ಈ ಹೊತ್ತಗೆ ಪ್ರತಿಯೊಬ್ಬರೂ ಓದಲೇಬೇಕಾದದ್ದಾಗಿದೆ.