ಕಳೆದ 30 ವರ್ಷದಿಂದ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಎಂಬಲ್ಲಿನ ಹಂಝ ಮಲಾರ್ ವೃತ್ತಿಯಲ್ಲಿ ಪತ್ರಕರ್ತ. ತನ್ನ ವೃತ್ತಿಯ ಸಂದರ್ಭ ನಾನಾ ವಿಧದ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಜೀವನಾನುಭವ ಪಡೆಯುತ್ತಿರುವ ಹಂಝ ಮಲಾರ್ ಅವುಗಳನ್ನೆಲ್ಲಾ ಕಥೆಗಳಿಗೆ ಬಳಸಿಕೊಳ್ಳುತ್ತಿರುವುದು ವಿಶೇಷ. ಕಥನ ಕಲೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಹಂಝ ಮಲಾರ್ ಈವರೆಗೆ 230 ಕಥೆಗಳನ್ನು ಬರೆದಿದ್ದಾರೆ. ಈ ಸಂಕಲನದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಬರೆದ 10 ಕಥೆಗಳಿವೆ. "ಅರ್ಧ ಹಿಂದೂ-ಅರ್ಧ ಮುಸ್ಲಿಂ" ಜಾತ್ಯತೀತ ವ್ಯಕ್ತಿಯ ಒಳನೋಟದ ಬಗ್ಗೆ ಬೆಳಕು ಚೆಲ್ಲಿದೆ. ಪ್ರೇಮಿಗಳು ಹುಟ್ಟೂರು ಬಿಟ್ಟು ಬೇರೊಂದು ಊರಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುವಾಗ ಪ್ರಿಯತಮೆಯನ್ನು ಮಾತ್ರ ಕೇಂದ್ರೀಕರಿಸುವುದರ ಬಗ್ಗೆ "ಓಡಿ ಬಂದವಳು" ಕಥೆಯಲ್ಲಿ ಚಿತ್ರಿಸಲಾಗಿದೆ. "ಉಮ್ಮಾ..." ಕಥೆಯು ಪ್ರತಿಷ್ಠಿತ ಕುಟುಂಬದ ಹಿರಿಯ ಮಹಿಳೆಯೊಬ್ಬರು ಆಧುನಿಕ ಬದುಕಿಗೆ ಒಗ್ಗಿಕೊಳ್ಳುವುದರ ಬಗ್ಗೆ ತಿಳಿಸುತ್ತದೆ. ಉಳಿದಂತೆ ಎಲ್ಲಾ ಕಥೆಗಳು ಒಂದನ್ನೊಂದು ಬಿಟ್ಟುಕೊಡದಷ್ಟು ವಸ್ತುವಿನಲ್ಲಿ ಪೈಪೋಟಿ ಮಾಡುತ್ತದೆ.