ತಾರಕ್ಕನನ್ನು ಮನೆಯ ಹೊರಕಟ್ಟೆಯಿಂದ ಹಿಡಿದು ಹಿತ್ತಲವರೆಗೂ ಹುಡುಕಿದ. ಎದೆಬಡಿತ ಹೆಚ್ಚಾಗುತ್ತಿದ್ದಂತೆ ಕಟ್ಟಕಡೆಯದಾಗಿ ದೇವರಮನೆಯ ಬಾಗಿಲು ದೂಡಿದ. ನಂದಾದೀಪದ ಬೆಳಕಲ್ಲಿ ತಾರಕ್ಕನ ಮುಖ ಕಂಡಿತು. ಸಮಾಧಾನಕ್ಕಿಂತ ಹೆಚ್ಚಾಗಿ ಅಚ್ಚರಿ ಆಯಿತು. ನಿಟ್ಟುಸಿರು ಬಿಟ್ಟ. ಮೊಣಕಾಲುಗಳ ಮೇಲೆ ಗದ್ದವನ್ನಿಟ್ಟುಕೊಂಡು ದೀಪವನ್ನೇ ದಿಟ್ಟಿಸುತ್ತಿದ್ದ ಆಕೆಯ ಕಣ್ಣುಗಳು, ಉನ್ನತ್ತ ಗಂಧರ್ವನೊಬ್ಬನ ಕೈಯಿಂದ ಜಾರಿಬಿದ್ದ ಕಪ್ಪು ದ್ರಾಕ್ಷಿಗಳನ್ನು ಹಿಡಿದಿಟ್ಟುಕೊಂಡು ಮತ್ತೆ ಅವನ ಬರುವಿಕೆಗಾಗಿ ಕಾಯುತ್ತಿವೆಯೇನೋ ಎಂಬಂತಿದ್ದವು. ಆ ನಿಶ್ಚಲ ಕಣ್ಣುಗಳನ್ನೇ ನೋಡುತ್ತ ಗೋಡೆಗಾತು ಕುಳಿತ. ಸ್ವಲ್ಪ ಹೊತ್ತಿನ ನಂತರ ತಾನೂ ಅದೇ ದೀಪ ನೋಡಹತ್ತಿದ. ತಾರಕ್ಕನ ಪ್ರಭೆಯೆದುರು ಅಲ್ಲಿದ್ದ ದೇವ-ದೇವತೆಯರು ತಮ್ಮ ಪ್ರಭಾವಳಿಗಳನ್ನು ಕಳೆದುಕೊಂಡು ಕೇವಲ ಪಟದಲ್ಲಿ ಲೋಹದಲ್ಲಿ ಮೂಡಿಸಿಕೊಂಡ ನಿರ್ಜೀವ ಆಕೃತಿಗಳಂತೆ ಕಂಡರು.