ಇಲ್ಲೊಂದು ಹೊಸ ಲೋಕವಿದೆ.. ಓಹ್! ಒಂದು ಭಾವಸಮುದ್ರದಲ್ಲಿ ಮುಳುಗೇಳುವುದು ಅಂದರೆ ಏನು ಎನ್ನುವುದು ಗೊತ್ತಾಗಬೇಕಾದರೆ ಪಿ ಚಂದ್ರಿಕಾ ಅವರ ಈ 'ಪ್ಯಾಲೆಟ್' ಓದಬೇಕು. 'ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ' ಎಂದಾದಾಗ ಅವರು ಕಟ್ಟಿಕೊಡಲು ಹೊರಟಿದ್ದು ತನ್ನದೇ ಲೋಕವನ್ನು ಕಟ್ಟಿಕೊಟ್ಟ ಬರಹಗಳೆಲ್ಲವೂ ಅವರೇ ಬಣ್ಣಿಸಿಕೊಳ್ಳುವ ಹಾಗೆ ಅದು ತಾನು 'ಒಬ್ಬಳೆ ಆಡುವ ಆಟ'. ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುತ್ತಾರೆ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಬರಹಗಳಾಗಿಬಿಡುತ್ತದೆ. ಅವರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಈ 'ಪ್ಯಾಲೆಟ್' ನನ್ನನ್ನು ಹಲವು ಕಾಲ ತನ್ನ ತಿರುಗಣಿಯಲ್ಲಿ ಸಿಕ್ಕಿಸಿಕೊಂಡಿದೆ. ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ ಎನ್ನುತ್ತಾರೆ ಚಂದ್ರಿಕಾ. 'ಪ್ಯಾಲೆಟ್' ಓದಿದಮೇಲೆ ಅಂತಹ 'ಅದೃಷ್ಟ' ನನ್ನದಾಗಿದೆ. ಇದನ್ನು ಓದಿದ ನಂತರ ನಿಮಗೂ ಆ ಅದೃಷ್ಟ ಒಲಿಯಲಿದೆ.
nil