‘ಆಧುನಿಕ ಮನೋವಿಜ್ಞಾನದ ಪ್ರವರ್ತಕರು’ ಪುಸ್ತಕ ಮೇಲ್ನೋಟಕ್ಕೆ ನೂರೊಂದು ಜನ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಡುವ ಸ್ವರೂಪದಲ್ಲಿದ್ದರೂ ವಾಸ್ತವವಾಗಿ ಇದು ಮನೋವಿಜ್ಞಾನದ ಇತಿಹಾಸವನ್ನು ಕನ್ನಡದಲ್ಲಿ ನಿರೂಪಿಸುವ ಅಪರೂಪದ ಪುಸ್ತಕ. ಯಾವ ವಿಷಯವನ್ನೇ ಆದರೂ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಬಸವಣ್ಣನವರ ಅಧ್ಯಯನ ಕ್ರಮ. ಇದು ರೂಢಿಯ ಇತಿಹಾಸದ ಮಾದರಿಯಲ್ಲ, ನೂರೊಂದು ಮಂದಿ ಮನೋವಿಜ್ಞಾನಿಗಳ ಬದುಕು-ಸಾಧನೆ, ಅವರು ಮನೋವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಮನೋವಿಜ್ಞಾನವನ್ನು ಬೆಳೆಸಿದ ಬಗೆಯನ್ನು ಕಟ್ಟಿಕೊಡುತ್ತಲೇ ಬಸವಣ್ಣನವರು ಮನೋವಿಜ್ಞಾನದ ಇತಿಹಾಸವನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಕಾಲಾನುಕ್ರಮದಲ್ಲಿ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಟ್ಟಿರುವುದು ಈ ಆಶಯಕ್ಕೆ ಪೂರಕವಾಗಿದೆ. ವಿಲ್ ಹೆಲ್ತ್ ವೊಂಟ್ ನಿಂದ ಹಿಡಿದು ಇಂದಿನ ಸುಪರ್ಣಾ ರಾಜಾರಾಮ್ ವರೆಗೆ ಈ ಶತಮಾನದ ಎಲ್ಲ ಪ್ರಮುಖ ಮನೋವಿಜ್ಞಾನಿಗಳ ಬಗೆಗೆ ಇಲ್ಲಿ ಮಾಹಿತಿ ಇದೆ. ಇದನ್ನು ಓದುತ್ತಾ ಹೋದಂತೆ ಮನೋವಿಜ್ಞಾನ ಜಗತ್ತಿನ ಸಾಧಕರ ಸಾಧನೆಯ ಪಯಣದಲ್ಲಿ ಹಾದು ಬಂದ ಅನುಭವವಾಗುತ್ತದೆ. ಜಗತ್ತಿನ ಜ್ಞಾನ ಕನ್ನಡ ಮನಸ್ಸುಗಳಿಗೆ ಕನ್ನಡದಲ್ಲಿಯೇ ಸಿಗಬೇಕೆಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಈ ಪ್ರಯತ್ನ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಮಹತ್ವದ್ದು, – ನರಹಳ್ಳಿ ಬಾಲಸುಬ್ರಹ್ಮಣ್ಯ ಮುನ್ನುಡಿಯಿಂದ
nil