nil
ಪ್ರತಿಷ್ಠಿತ ಸಮಾಜದ ಹುಸಿ ಮೌಲ್ಯವನ್ನು, ಗಾಂಭೀರ್ಯವನ್ನು ಚುಚ್ಚಿ ವಿಡಂಬಿಸಿ ಘಾಸಿಗೊಳಿಸುವುದರಲ್ಲಿ ನಿಷ್ಣಾತರಾಗಿರುವ ಕುಂವೀಯವರು ಕನ್ನಡ ಕಾದಂಬರಿ ಲೋಕಕ್ಕೆ ವಿನೂತನ ತಿರುವು ನೀಡಿದ ಅಪೂರ್ವ ಕತೆಗಾರ. ಪ್ರತಿ ವರ್ಷ ಒಂದು ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುತ್ತಿರುವ ಅವರು ನಿರ್ಲಕ್ಷಿತ ಸಮುದಾಯಗಳ ಮಾನಾವಮಾನಗಳಿಗೆ ದನಿ ಕೊಟ್ಟು ಮಡಿವಂತರನ್ನು ಗೇಲಿ ಮಾಡಿ ವಿಡಂಬನೆಗೆ ಗುರಿ ಮಾಡುವ ಮೂಲಕ ಸಾಮಾಜಿಕವಾಗಿ ಪ್ರಸ್ತುತವೆನ್ನಿಸಿದ್ದಾರೆ. ಅತಿ ರಂಜಿತ ವರ್ಣನಾ ಶೈಲಿ ಮತ್ತು ಪಾತ್ರವನ್ನು ಭೂತಗನ್ನಡಿಯಲ್ಲಿಟ್ಟು ಹಿಗ್ಗಿಸಿ ನೋಡುವ ಅವರ ನಿರೂಪಣೆ ಉದ್ದೇಶಪೂರ್ವಕವಾಗಿದ್ದು ವಿಡಂಬನಾತ್ಮಕ ಗುರಿ ಹೊಂದಿದೆ. ಪ್ರಸ್ತುತ ‘ಲ್ಯಾಟರೀನಾ’ ವಸ್ತುವೆ ವಿಶಿಷ್ಟವಾಗಿದ್ದು ಬಹಿಷ್ಕೃತವೆನ್ನಿಸಿದ್ದನ್ನು ಎಗ್ಗಿಲ್ಲದೆ ಚರ್ಚಿಸಿ ಎಲ್ಲರನ್ನು ಗಾಬರಿಗೊಳಿಸುವಂತಿದೆ. ಮಲವಿಸರ್ಜನೆಯಂತಹ ಸಹಜ ದೈಹಿಕ ಕ್ರಿಯೆಯನ್ನು ಮುಚ್ಚುಮರೆಯ ಅಸಹ್ಯದ ಸಂಗಾತಿಯನ್ನಾಗಿಸಿರುವ ಸಾಮಾಜಿಕ ವಾಸ್ತವವನ್ನು ವಿಡಂಬಿಸಿ ಬೃಹತ್ ಕಾದಂಬರಿಯ ವಸ್ತುವಾಗಿಸಿಕೊಂಡು ತನ್ಮೂಲಕ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾದ ರಾಜಕಾರಣಿಗಳು, ಮಠಾಧಿಪತಿಗಳು, ಪತ್ರಕರ್ತರು, ಲೇಖಕರು ಮತ್ತು ಗಾಂಧಿವಾದಿಗಳೆಲ್ಲರನ್ನೂ ಗೇಲಿ ಮಾಡಲಾಗಿದೆ. ಹೆಗಲ ಮೇಲೆ ಮಲ ಹೊತ್ತು ಸಾಗಿಸುವ ಹೆಣ್ಣು ಮಕ್ಕಳ ಪಡಿಪಾಟಲಿಗೆ ಕನಿಕರಿಸುತ್ತಲೇ ಅವರ ಹೊಟ್ಟೆಪಾಡಿನ ಕ್ರೂರ ವಾಸ್ತವವನ್ನೂ ಮನವರಿಕೆ ಮಾಡಿಕೊಡಲಾಗಿದೆ. ಹಂದಿಗಳು, ಎಮ್ಮೆ, ಹಸು, ನಾಯಿಗಳೂ ಶುದ್ದೀಕರಣದಲ್ಲಿ ಪಾಲ್ಗೊಳ್ಳುವ ಚಿತ್ರ ನಮ್ಮ ದೇಶದ ಹುಸಿ ಪ್ರತಿಷ್ಠೆಯನ್ನು ಬಯಲು ಮಾಡುತ್ತದೆ. ಹಾಸ್ಯ ಮತ್ತು ವಿಡಂಬನೆಯೇ ಕಾದಂಬರಿಯ ಸ್ಥಾಯಿಭಾವವೆಂಬಂತಿದ್ದರೂ, ಆಳದಲ್ಲಿ ವ್ಯವಸ್ಥೆಯ ಬಗೆಗೆ ಆಕ್ರೋಶವಿದೆ. ಹುಸಿ ಸಾಮಾಜಿಕ ಪ್ರತಿಷ್ಠೆ ಬಗೆಗೆ ತಿರಸ್ಕಾರವಿದೆ. ಮನಸ್ಸಿನಲ್ಲಿ ತುಂಬಿಕೊಂಡಿರುವ ಗಲೀಜು ಬಾಹ್ಯ ಕೊಳಕಿಗಿಂತ ಅಸಹ್ಯಕಾರಿ ಎಂಬ ಸಂದೇಶದೊಂದಿಗೆ ಕಾದಂಬರಿಗೆ ಅರ್ಥಪೂರ್ಣ ಮುಕ್ತಾಯ ದೊರಕಿಸಿಕೊಡಲಾಗಿದೆ. – ಡಾ. ಕೆ. ಮರುಳಸಿದ್ದಪ್ಪ
ಕನ್ನಡದ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಅವರು ಬರೆದಿರುವ ವಿನೂತನ ಕಾದಂಬರಿ ಇದಾಗಿದೆ. ಕುತೂಹಲ ಕಥಾವಸ್ತು ಹೊಂದಿರುವ ಕಾದಂಬರಿ ರೋಚಕವಾಗಿದೆ. ಹಲವು ಫ್ಯಾಂಟಸಿ ಕಥೆಗಳ ಮೂಲಕ ಶತಮಾನದ ‘ವಿಶ್ವಸುಂದರಿ’ ಪಾತ್ರಧಾರಿಯಾಗಿರುವ ಅಜ್ಜಿ ನಿಮ್ಮನ್ನು ಆವರಿಸಲಿದ್ದಾಳೆ. ನಿಮಗೆ ಸುಲಭವಾಗಿ ಓದಿಸುವ ನಿಟ್ಟಿನಲ್ಲಿ ಲೇಖಕರು ಭಾಷೆ, ಶೈಲಿಯನ್ನು ಸರಳೀಕರಿಸಿ ಬರೆದಿದ್ದಾರೆ. ಒಮ್ಮೆ ನೀವು ಕಾದಂಬರಿಯ ಪುಟಗಳನ್ನು ಓದಲು ಶುರು ಮಾಡಿದರೆ ಸಾಕು ಕೊನೆತನಕ ಓದಿಸಿಕೊಳ್ಳುವ ಗುಣವಿದೆ. ಕನ್ನಡಿಗರಾದ ನೀವು ಈ ಕಾದಂಬರಿಯನ್ನು ಓದಲೇಬೇಕು, ಇದರಿಂದ ನಿಮಗೆ ಎಷ್ಟೊಂದು ಮನರಂಜನೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ. ಅಷ್ಟೊಂದು ಚೆಂದವಿದೆ ಕಾದಂಬರಿ.