ಯುವಜನತೆಯನ್ನು ಯುವಶಕ್ತಿ ಎಂತಲೂ ಕರೆಯುತ್ತಾರೆ. ವಿದ್ಯಾರ್ಥಿ ಜೀವನವನ್ನು ಬದುಕಿನ ಸುವರ್ಣ ಯುಗ ಎನ್ನಬಹುದಾಗಿದೆ. ಜೀವನದ ಈ ಹಂತದಲ್ಲಿ ಶ್ರಮ, ಸಾಮರ್ಥ್ಯ ಬಳಸಿಕೊಂಡು ಉದ್ಯೋಗ ಸಂಪಾದನೆ ಮಾಡಬಹುದಾಗಿದೆ. ಬಿತ್ತಿದಂತೆ ಬೆಳೆ ಪಡೆಯುವ ಕಾಲ ಯೌವನ. ನಮ್ಮ ಪರಿಶ್ರಮ, ಬುದ್ದಿಮತ್ತೆ ಬಳಸಿಕೊಂಡು ಮುನ್ನುಗ್ಗಿ ಹೋಗುವ ಕಾಲವಿದು. ಆದರೆ ಇದೇ ಕಾಲಘಟ್ಟ ಆಕರ್ಷಣೆಯ ಹಿಂದೆ ಓಡೋಗುವ ಮನಸಿನಿಂದಲೂ ಹಾಳಾಗಬಹುದು.
ಜಾಹಿರಾತು ಮಾಫಿಯಾ ವಿದ್ಯಾರ್ಥಿಗಳಿಗೆ ಬ್ರಾಂಡ್ ಗಳ ಹುಚ್ಚು ಹಿಡಿಸಲು ಯತ್ನಿಸುತ್ತಿದೆ.. ವಿದ್ಯಾರ್ಥಿಗಳು ಜ್ಞಾನಕಾಂಕ್ಷಿಗಳಾಗದಂತೆ ತಡೆಯುವ ತಂತ್ರಗಳು ಈ ಬ್ರಾಂಡ್ ಭರಾಟೆ ಹೆಣೆಯುತ್ತಿದೆ. ವಿದ್ಯಾರ್ಥಿಗಳು ಕೊಳ್ಳುಬಾಕ ಸಂಸ್ಕೃತಿಗಳ ಹರಿಕಾರರಾಗಿ ದಿಕ್ಕುತಪ್ಪುವಂತೆ ಮಾಡುವ ಎಲ್ಲಾ ವಿತಂಡ ಯೋಜನೆಗಳು ಜಾಹಿರಾತು ಗಳಲ್ಲಿ ಕಾಣಸಿಗುತ್ತದೆ.ಆದರೆ ಹಂಸವು ನೀರು ಬೆರೆತ ಹಾಲು ಎರಡನ್ನೂ ಬೇರ್ಪಡಿಸುವ ಹಾಗೆ ವಿದ್ಯಾರ್ಥಿಗಳು ಬೇಡದ್ದನ್ಬು ಬೇರ್ಪಡಿಸಿ ಬೇಕಾದ್ದನ್ನು ಮಾತ್ರ ಹೆಕ್ಕಿಕೊಳ್ಳಬೇಕು. ಆಗಲೇ ಭವಿಷ್ಯದ ಕನಸುಗಳು ಸಾಕಾರಗೊಳ್ಳುವುದು. ತಂದೆ ತಾಯಿಯ ಶ್ರಮದ ಫಲ ಕೈಗೂಡುವುದು.
ಉದ್ಯೋಗ ಇಂದು ಸ್ತ್ರೀ ಪುರುಷರ ಲಕ್ಷಣವಾಗಿದೆ. ಆರ್ಥಿಕ ಸ್ವಾತಂತ್ರ್ಯ ಪಡೆದರೆ ಒಂದು ರೀತಿಯಲ್ಲಿ ಆಸೆ, ಕನಸುಗಳಿಗೆ ರೆಕ್ಕೆ ಮೂಡುವುದು. ಯಾವುದೋ ಸಿಕ್ಕಿದ ಉದ್ಯೋಗ ಪಡೆದು ಜೀವನವಿಡಿ ಅದಕ್ಕೇ ನಿಮಿತ್ತವಾಗಿರಬೇಕಾದ ಅಗತ್ಯವಿಲ್ಲ. ಬದಲಿಗೆ ದುಡಿದು ಹಣ ಉಳಿಸಿ ಸ್ವಂತ ಉದ್ಯಮ ಸಹ ಬೆಳೆಸಿದವರ ಯಶೋಗಾಥೆಗಳು ನಮಗೆ ನೂರಾರು ಸಿಗುತ್ತವೆ. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಉನ್ನತ ವಿದ್ಯಾಭ್ಯಾಸ ನಡೆಸಿ ಇಷ್ಟಪಟ್ಟ ಉದ್ಯೋಗ ಪಡೆದವರೂ ಅನೇಕರಿದ್ದಾರೆ.
ಕೆಲವೊಬ್ಬರಿಗೆ ಕುಟುಂಬದ ಹಿರಿಯರು ಮಾಡಿಟ್ಟ ವ್ಯವಹಾರ ನೋಡಿಕೊಳ್ಳಲು ಮಾತ್ರ ವಿದ್ಯಾಭ್ಯಾಸ ಬೇಕಿರುತ್ತದೆ. ಆದರೆ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹಾಗಲ್ಲ, ಅವರು ಪರಿಶ್ರಮ ಮತ್ತು ಸತತ ಪ್ರಯತ್ನದಿಂದಷ್ಟೇ ಸಾಧಿಸಬೇಕಾದ ಛಲ ಹೊಂದಿರಬೇಕಾಗುತ್ತದೆ. ಹೀಗಾಗಿ ಬೇಕಾದ ವೃತ್ತಿ ಪಡೆಯಬಹುದು, ಇಷ್ಟಬಂದಂತೆ ಉನ್ನತ ಅಧ್ಯಯನ ನಡೆಸಬಹುದು. ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಕಾದ ಅಗತ್ಯವೇ ಇಲ್ಲ.
ಯಾವಾಗಲೂ ಹೊಸ ದಾರಿ ಹುಡುಕಿ ನಡೆಯಬೇಕು, ಅ ಆಗ ಎಲ್ಲರಿಂತಿರದೆ ಭಿನ್ನರಾಗಿ ನಿಲ್ಲಲು, ಸಾಧಿಸಲು ಸಾಧ್ಯವಿದೆ. ಎಪಿಜೆ ಅಬ್ದುಲ್ ಕಲಾಂರಂತ ಮಹನೀಯರು ನಮ್ಮ ಮುಂದಿದ್ದಾರೆ. ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ಅವರು ಏರಿದ ಎತ್ತರ ಅದೆಷ್ಟು ಸೋಜಿಗವಲ್ಲವೇ?
ವಿದ್ಯಾರ್ಥಿ ಮಿತ್ರರೇ ಕೇಳಿ, ನಿಮ್ಮ ಉಜ್ವಲ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಇದು ಪ್ರಮುಖ ಹಂತ. ಯಾವುದೇ ವಿಷಯವನ್ನು ಕ್ಲಿಷ್ಟ ಎಂದು ನಿರ್ಧರಿಸದೆ ಬೋಧಕರ ಜೊತೆಗೆ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಪಡೆಯಬೇಕು. ಬಿಡುವಿನ ವೇಳೆಯಲ್ಲಿ ಸಹಪಾಠಿಗಳ ಜೊತೆಗೆ ಸಹ ಓದಿನ ವಿಚಾರಗಳ ಮಂಥನ ನಡೆಸುವುದು ಉತ್ತಮವಾದ ಹವ್ಯಾಸ. ಹೀಗೆ ಮಾಡುತ್ತಾ ನಪಾಸಾಗದೆ ಅಧ್ಯಯನದ ಕೋರ್ಸ್ ಪೂರ್ಣಗೊಳಿಸಿಕೊಳ್ಳಬೇಕು. ಒಂದುಪಕ್ಷ ನಪಾಸಾದರೇನಂತೆ ಅದರ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ಕೆಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ನೋಟ್ಸ್ ಮಾಡಿ ಓದಿಕೊಂಡಾಗ ಪರೀಕ್ಷೆ ಸಹ ಸುಲಭವಾಗುವುದು.
ವಿದ್ಯಾರ್ಥಿ ಜೀವನದಲ್ಲಿ ಜಾರದಂತೆ ಬುದ್ದಿ ಮನಸ್ಸು ವಿಕಲ್ಪಗಳಿಗೆ ಮಣಿಯದಂತೆ ನಡೆಯಬೇಕಾದ ಅಗತ್ಯವಿದೆ. ಕಷ್ಟ ಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಸಹ ನಮ್ಮನ್ನು ಅರಸಿ ಬರುವುದು.