• Welcome to Our store    Veeraloka Books
  • Call Us : +91 7022122121 / +91 8861212172

ಚಿತ್ತ ಸೆಳೆಯುವ "ಇತ್ತ ಹಾಯಲಿ ಚಿತ್ತ" ಕಥಾ ಸಂಕಲನ

  • 10 September 2024

"ಎಲ್ಲ ಹತ್ತು ಕಥೆಗಳ ನಿರೂಪಣೆ ಅತ್ಯಂತ ಭಾವುಕವಾಗಿ ಅಭಿವ್ಯಕ್ತಿಗೊಂಡಿದ್ದರೂ ವೈಚಾರಿಕ ಹೊಳಹೂ ಇರುವುದು ಈ ಸಂಕಲನದ ವೈಶಿಷ್ಟ್ಯ. ಒಮ್ಮೆ ಓದಲು ಆರಂಭಿಸಿದರೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವ ಕಥೆಗಳಾಗಿದ್ದು ಒಂದನ್ನು ಬಿಟ್ಟರೆ ಎಲ್ಲವೂ ಹೊಸ ಆಶಯ ಹುಟ್ಟಿಸುವ ಕಥೆಗಳೇ ಆಗಿವೆ ಭಾಷೆಯೂ ಆಪ್ತವಾಗಿದೆ. ಈ ಎಲ್ಲ ಕಥೆಗಳು ಕುಮಟಾದ ಬಳಿಯ ಕತಗಾಲ, ಅಂತ್ರವಳ್ಳಿ, ಆನೆಗುಂದಿ ಮತ್ತು ಹುಬ್ಬಳ್ಳಿಯ ಸುತ್ತಲೇ ರೂಪಿತವಾಗಿರುವುದು ವಿಶೇಷ " ಎಂದು ಅರುಣ್ ಕುಮಾರ್ ಹಬ್ಬು ಅವರು "ಇತ್ತ ಹಾಯಲಿ ಚಿತ್ತ" ಕೃತಿಯ ವಿಮರ್ಶೆಯಲ್ಲಿ ಬರೆದಿದ್ದಾರೆ.

ಚಿತ್ತ ಸೆಳೆಯುವ "ಇತ್ತ ಹಾಯಲಿ ಚಿತ್ತ" ಕಥಾ ಸಂಕಲನ
ಕಥೆಗಾರ್ತಿ: ಕವಿತಾ ಹೆಗಡೆ ಅಭಯಂ
ವೈವಿಧ್ಯಮಯ ಪ್ರತಿಭಾವಂತ ಲೇಖಕಿ, ಶಿಕ್ಷಕಿ, ಕಥೆಗಾರ್ತಿ, ಪ್ರಬಂಧಕಾರ್ತಿ, ಕವಯಿತ್ರಿ ಕವಿತಾ ಹೆಗಡೆ ಅಭಯಂ ಅವರ ಎರಡನೇ ಕಥಾ ಸಂಕಲನ ಇದೀಗ ಓದುಗರ ಕೈಸೇರಿದ್ದು ಓದುತ್ತ ಸಾಗುತ್ತಿದ್ದಂತೆ ವಿಭಿನ್ನ ಕಥಾ ಪ್ರಪಂಚವೇ ನಮ್ಮೆದರು ತೆರೆದು ನಿಂತು ನಮ್ಮ ಚಿತ್ತವನ್ನು ತೀವ್ರವಾಗಿ ಸೆಳೆಯುತ್ತದೆ. ಒಟ್ಟೂ ಹತ್ತು ಕಥೆಗಳ ಸುಂದರ ಗುಚ್ಛವಿದು.
ಬದುಕಿನ ಅನುಭವಗಳು ಸದಾ ಭಿನ್ನ. ಅವು ಅಕ್ಷರ ರೂಪದಲ್ಲಿ ಒಡಮೂಡಿದಾಗ ಅದಕ್ಕೊಂದು ಸ್ಪಷ್ಟ ರೂಪ ಒದಗುತ್ತದೆ. ಕವಿತಾ ಅವರು ಈ ಸಂಕಲನದ ಮೂಲಕ ತಾನೊಬ್ಬ ಅಪ್ಪಟ ಕಥೆಗಾರ್ತಿ ಎನ್ನುವುದನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿದ್ದಾರೆ. ಒಂದೊಂದು ಕಥೆಯೂ ಒಂದೊಂದು ರೀತಿಯ ಅನುಭವದ ಅಭಿವ್ಯಕ್ತಿ. ಜೀವನದ ದ್ವಂದ್ವದಲ್ಲಿದ್ದ ಅಮನ್ ಗುರೂಜಿಯ ಆಶ್ರಯದಲ್ಲಿ ಹೊಸ ಭರವಸೆ ಕಂಡುಕೊಂಡ ಪರಿ ಅನನ್ಯ ಎನ್ನುವುದು 'ನಂಬಲೇನು ನಿನ್ನ' ಕಥೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಇತ್ತ ಹಾಯಲಿ ಚಿತ್ತ ಶೀರ್ಷಿಕೆ ಕಥೆಯಲ್ಲಿ ಮಂಜು ಕೆಲಕ್ಕೆ ಬಂದವನು ಅಂಗಡಿಯ ಮಾಲಕನಾಗುವುದು, ಕೊನೆಗೆ ಮುಗ್ದ ಹೇಮಾ ಜೊತೆಗೂಡುವುದು ಹಕ್ಕಿ ಗೂಡಿನ ಸಂಕೇತದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. "ನೀ ಏನರ ಗೂಡ್ ತಗದಿ ಮಗನ ನಿಂದ ತಲೀಗ್ ಕಲ್ ಹೊಡಿತೀನಿ" ಎಂಬ ಹೇಮಾಳ ಉದ್ಘಾರ ಪ್ರೀತಿಯ ತುರಿಯಾವಸ್ಥೆಯ ಸಂಕೇತ. ಓದುತ್ತ ನಾವಆಗಿವೆ ಕ ತಿಯೆಂಬ ಲೋಕದಲ್ಲಿ ತೇಲಾಡುವಂತಾಗುತ್ತದೆ.
ಸಂಭಾವನೆ ಸುಬ್ನಿಯ ಕಥೆ ಇನ್ನೊಂದು ಥರ. ಅವಳು ತನ್ನ ಹಿನ್ನೆಲೆಯನ್ನು ಮುಚ್ಚಿಟ್ಟು ಊರೂರು ತಿರುಗುವ ಹವ್ಯಾಸ ಸೃಷ್ಟಿಸಿಕೊಂಡ ಮಹಿಳೆ. ಕಥೆಯ ಅಂತ್ಯದವರೆಗೂ ಅವಳ ಮೇಲೆ ಅನುಕಂಪ ಮೂಡುತ್ತದೆ. ಆದರೆ ಅವಳ ಮೂಲ ಅರಸುತ್ತ ಹೊರಟ ಕಥಾ ನಾಯಕಿ ಸುಬ್ಬಿಯ ಮಗನಿಂದ ವಿಷಯ ತಿಳಿದು ತೀವ್ರ ಭ್ರಮನಿರಸನಕ್ಕೊಳಗಾಗುತ್ತಾಳೆ. ಮನುಷ್ಯನ ಮಾನಸಿಕ ಅವಸ್ಥೆಯ ಒಂದು ಭಿನ್ನ ರೂಪ ಇಲ್ಲಿ ಅನಾವರಣಗೊಳ್ಳುತ್ತದೆ.
'ವಿಷವುಂಡವನ ಹೆಂಡತಿ' ಅಚ್ಚರಿಯ ಅಂತ್ಯ ಕಾಣುವ ಇನ್ನೊಂದು ಕಥೆ. ಅನಾಥೆ ಎಂದುಕೊಂಡಿದ್ದ ಎರಡು ಮಕ್ಕಳ ತಾಯಿಯೊಬ್ಬಳನ್ನು ಅಕ್ಕರೆಯಿಂದ ಸಾಕಿದ ರಾಜಸ್ತಾನಿ ವ್ಯಕ್ತಿ ಕೊನೆಗೆ ಅವಳು ಕೈಕೊಟ್ಟು ಇನ್ನೊಬ್ಬನ ಆಸರೆ ಪಡೆದಾಗ ಆಗುವ ಮಾನಸಿಕ ವೇದನೆಯ ಕಥಾನಕವಿದು. ಇನ್ನು ನೀನಾದೆ ನಾ? ಎಂಬ ಅಕ್ಕ ತಂಗಿಯರ ಕಥೆ ಅವರಿಬ್ಬರ ನಡುವಿನ ಭಾನಾತ್ಮಕ ಸಂಬಂಧಗಳನ್ನು ನಿರೂಪಿಸಿ ನಮ್ಮ ಚಿತ್ತವನ್ನು ಆಕರ್ಷಿಸುತ್ತದೆ. ಯಾರವನು ಕಥೆಯಲ್ಲಿ ದೈಹಿಕ
ಶಿಕ್ಷಕ ಅನಿಕೇತ ದುರಂತ ಎದುರಿಸಿದಾಗ ಅನಾಮಿಕ ಕುರಿಗಾಹಿ ಬಾಲಕ ಬಂದು ಜೀವ ಉಳಿಸುವ ಸುಂದರ ಘಟನೆಯ ಚಿತ್ರಣವಿದೆ.
ಚಂಡಿಕಾ ಎಂಬ ಮುಗ್ದ ಮಹಿಳೆ ಅನೇಕ ಸಂಕಷ್ಟಗಳನ್ನು ಎದುರಿಸಿ ತನ್ನ ಹೊಸ ಜೀವನದ ಗಮ್ಯ ಸೇರಿದ್ದು ಇನ್ನೊಂದು ವಿಭಿನ್ನ ಕಥೆ ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ
'ನಿನ್ನ ದಾರಿಯಲ್ಲಿ' ಮಹಿಳೆಯೊಬ್ಬಳ ಎರಡು ಸಂಸ್ಕೃತಿಗಳ ಮಧ್ಯೆ ಸಿಲುಕಿ ತಾಕಲಾಟವನ್ನು ಅನುಭವಿಸುವ ಕಥೆ. ಕೊನೆಗೂ ಯಾವುದನ್ನೂ ನಿರ್ಧರಿಸಲಾಗದೇ ತಾನೇ ಕಟ್ಟಿಕೊಂಡ ಕೋಟೆಯೊಳಗೆ ಸೇರುವ ಸಂಗತಿ ಮನವನ್ನು ಆರ್ದ್ರಗೊಳಿಸುತ್ತದೆ. ಮುಗ್ದ ಬಾಲಕಿಯೊಬ್ಬಳು ಬಡತನದ ಬೇಗಡಯಲ್ಲಿ ನರಳುತ್ತ ಮೌನಕ್ಕೆ ಜಾರಿದರೂ ಕೊನೆಯಲ್ಲಿ ಈ ಎಲ್ಲ ಸಂಕೋಲೆಗಳಿಂದ ಹೊರ ಬಂದು ತನ್ನದೇ ಸುಖದ ದಾರಿಯನ್ನು ಕಂಡುಕೊಂಡು ಸುಖಾಂತ್ಯಬಕಾಣುವ ಕಥೆಯಾದರೆ ಕೊನೆಯ ಕಥೆ ಉಡಾಳ ಮಕ್ಕಳ ಜೊತೆ ಶಿಕ್ಷಕಿಯೊಬ್ಬಳು ಅನುಭವಿಸುವ ಮಾನಸಿಕ ವೇದನೆ ನಂತರ ಇದೇ ಮಕ್ಕಳು ಅವಳ ತಂದೆಯ ಮನೆಯ ಜೀರ್ಣೋದ್ಧಾರದಲ್ಲಿ ಕೂಲಿಗಳಾಗಿ ಕೆಲಸ‌ ಮಾಡುತ್ತ ಪರಿತಪಿಸುವುದು ಮಾರ್ಮಿಕವಾಗಿ ಮೂಡಿಬಂದಿದೆ.
ಈ ಎಲ್ಲ ಹತ್ತು ಕಥೆಗಳ ನಿರೂಪಣೆ ಅತ್ಯಂತ ಭಾವುಕವಾಗಿ ಅಭಿವ್ಯಕ್ತಿಗೊಂಡಿದ್ದರೂ ವೈಚಾರಿಕ ಹೊಳಹೂ ಇರುವುದು ಈ ಸಂಕಲನದ ವೈಶಿಷ್ಟ್ಯ. ಒಮ್ಮೆ ಓದಲು ಆರಂಭಿಸಿದರೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವ ಕಥೆಗಳಾಗಿದ್ದು ಒಂದನ್ನು ಬಿಟ್ಟರೆ ಎಲ್ಲವೂ ಹೊಸ ಆಶಯ ಹುಟ್ಟಿಸುವ ಕಥೆಗಳೇ ಆಗಿವೆ ಭಾಷೆಯೂ ಆಪ್ತವಾಗಿದೆ. ಈ ಎಲ್ಲ ಕಥೆಗಳು ಕುಮಟಾದ ಬಳಿಯ ಕತಗಾಲ, ಅಂತ್ರವಳ್ಳಿ, ಆನೆಗುಂದಿ ಮತ್ತು ಹುಬ್ಬಳ್ಳಿಯ ಸುತ್ತಲೇ ರೂಪಿತವಾಗಿರುವುದು ವಿಶೇಷ.
ವೀರಲೋಕ ಈ ಸಂಕಲನವನ್ನು ಪ್ರಕಟಿಸಿದೆ. ಕವಿತಾ ಸಹೋದರಿಗೆ ಶುಭವಾಗಲಿ.

- ಅರುಣಕುಮಾರ್ ಹಬ್ಬು