ಆತ್ಮೀಯ ಸಹೋದರಿ ಕನ್ನಡ ಕವಯಿತ್ರಿ ಡಾ. ಸುಮಂಗಲಾ ಅತ್ತಿಗೇರಿ ಅವರಲ್ಲಿ ಅಮೂರ್ತ ರೂಪದಲ್ಲಿದ್ದ ಭಾವನೆಗಳ ಹೂವುಗಳು ಮೊಗ್ಗಿನಾವಸ್ಥೆಯಿಂದ ವಾಚಿಸುವ ಕಣ್ಮನಗಳಿಗೆ ಹೂವಾಗಿ ಅರಳಿ ಮಕರಂದ ಸೂಸಿದೆ. ಹೆಣ್ಣಿನ ಗುಣಕ್ಕೆ ತಕ್ಕಂತೆ ರಚನೆಗಳು ಹೊರಬಂದಿವೆ. ಮಹಿಳೆಯ ನೋವು, ನಲಿವು, ಆಸೆ. ಆಕಾಂಕ್ಷೆ, ನಿರಾಸೆ, ದುಗುಡ, ದುಮ್ಮಾನಗಳ ಅನುಭವದ ಪಾಕದಿಂದ ಹೆತ್ತವರ ನೆನಪಿನವರೆಗೆ ತಮ್ಮ ಚಿತ್ರದಲ್ಲಿನ ಚಿತ್ರಗಳು ಹದ ತಪ್ಪದೆ ಪದ ರೂಪದಿಂದ ಎದೆಯ ಕದ ತೆರೆದು ಓದುಗರ ಮಂಗಳ ಮನಸ್ಸಿಗೆ ಸುಮಂಗಲವೆನಿಸಿದೆ. ಅವಳೀಗ ನೆನಪು ಮಾತ್ರ ಕವನ ಸಂಕಲನ ಇದವರ ಎರಡನೆಯ ಕೂಸು. ಇವರ ರಚನೆಯ ಸಾಲುಗಳೆಲ್ಲ ಕರುಳ ಬಳ್ಳಿಯಂತೆ ಬಳ್ಳಿ ಬಳ್ಳಿಯಾಗಿ ಹಸುರಿನಂತೆ ಅವರದೆಯಾದ ಅನುಭವದ ಉಸಿರಿನಿಂದ ಇದೀಗ ಎಲ್ಲರ ಮನೆ ಮತ್ತು ಮನಕ್ಕೆ ಹಬ್ಬಿ ಕಂಗೊಳಿಸಿದೆ. ಅಧ್ಯಯನದ ಜೊತೆ ಜೊತೆಗೆ ಅನುಭವದ ಮೂಸೆಯಿಂದ ಇವರ ಕವನ ಕುಲಾವಿ ತೊಟ್ಟಿದೆ. ಓದುಗರ ಮನ ಮುಟ್ಟುವಲ್ಲಿ ಕವಯಿತ್ರಿಯ ಕೈ ರಚನೆ ಕೈ ಹಿಡಿದಿದೆ. ಮನ ಮುಟ್ಟಿದೆ. ಎದೆ ತಟ್ಟಿದೆ. ಇಲ್ಲಿಯ ಸಾಲುಗಳೆಲ್ಲ ಕವಯಿತ್ರಿಯ ಅಂತರಾಳದ ದೀಪಗಳು, ಆ ದೀಪದಲ್ಲಿ ವಿನಯ, ವಿಸ್ಮಯ, ವೈಖರ್ಯ ರೂಪಗಳೇ ನುಡಿ ಬೆಳಕಾಗಿ ಬೆಳಗಿವೆ. ಒಟ್ಟಿನಲ್ಲಿ ಕನ್ನಡ ನಾಡಿನ ನರನಾಡಿಗೆ ಇಂತವರ ಸಾಹಿತ್ಯ ವ್ಯವಸಾಯವೇ ಜೀವನಾಡಿ, ಕವಯಿತ್ರಿಯ ಕೈರಚನೆಯ ಕೈಂಕರ್ಯ್ಯ ನಮ್ಮ ನಾಡಿನಲ್ಲಿ ಸತ್ಯಂ. ಶಿವಂ, ಸುಂದರಂ ನಂತೆ ದಿನನಿತ್ಯ ಕಂಗೊಳಿಸುತ್ತಿರಲಿ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಹಾಯಕ ದಾಖಲೀಕರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುಮಂಗಲಾ ಅತ್ತಿಗೇರಿ ಅವರ 'ಹೊಸ ಹೆಜ್ಜೆ ಹಾಕೋಣ : ಸಾರ್ಥಕ ಬದುಕಿನತ್ತ' ಕೃತಿಯನ್ನು ಎತ್ತಿಕೊಂಡಾಗ, ತಂಗಾಳಿಗೆ ಮುಖ ಮಾಡಿದ ಅನುಭವ, ಆರಂಭದಿಂದ ಕೊನೆಯ ಅಧ್ಯಾಯದ ತನಕ, ಒಂದು ನಿರಾತಂಕ, ಸರಾಗ ಓದಿನ ಸಾರ್ಥಕ ಓದಿನ ಪಯಣದಲ್ಲಿ ಸಹಪಥಿಕನಾದ ಅನುಭವ ನನ್ನದಾಗಿತ್ತು. ಡಾ. ಸುಮಂಗಲಾ ತೀರಾ ಸಹಜವಾಗಿ, ಸರಳವಾಗಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾ, ಒಂದು ಅನೂಹ್ಯ ಅನುಭವದ ಬದುವಿನೆಡೆಗೆ ನಮ್ಮನ್ನು ತಂದು ನಿಲ್ಲಿಸುತ್ತಾರೆ. ಈ ಕೃತಿಯ ಹೆಚ್ಚುಗಾರಿಕೆಯಿರುವುದೇ ಇಲ್ಲಿ. ಈ ಕೃತಿಯಲ್ಲಿನ ಬರಹಗಳೆಲ್ಲವೂ ಒಂದು ನಿರ್ದಿಷ್ಟ ಆಶಯ, ಉದ್ದೇಶಗಳನ್ನು ಹೊಂದಿವೆ. ಪ್ರತಿಯೊಂದೂ ವಿಷಯ ವಸ್ತುವೈವಿಧ್ಯತೆಯಿಂದ ಕೂಡಿದೆ. ಪ್ರತಿ ಅಧ್ಯಾಯದಲ್ಲಿ ಲೇಖಕಿ ಪ್ರಸ್ತಾಪಿಸಿದ ವಿಚಾರಗಳು ಚಿಂತನೆಗೆ ಹಚ್ಚುತ್ತವೆ. ನಾವೂ ಸಾರ್ಥಕ ಬದುಕಿನತ್ತ ಹೆಜ್ಜೆ ಹಾಕಬೇಕು ಎಂಬ ಉತ್ಕಟ ತುಡಿತವನ್ನು ಉಂಟು ಮಾಡುತ್ತವೆ. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿದೀವಿಗೆಯಾಗುವ ಪ್ರೇರಣೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಡಾ. ಸುಮಂಗಲಾ ಅವರ ಬರಹ ನಿರ್ಮಲ ಚಿಂತನೆಯ, ಸಾರ್ಥಕ ಬದುಕನ್ನು ಹೊಂದುವ ಗುರಿ ಹೊಂದಿದ್ದು, ಆ ದಿಕ್ಕಿನಲ್ಲಿ ಓದುಗರನ್ನು ಕರೆದೊಯ್ಯುವ ಸಮಷ್ಟಿ ಪ್ರಜ್ಞೆ ಜಾಗೃತಗೊಳಿಸುವ ಹಂಬಲ ಹೊಂದಿದೆ.