ಇದು ನನ್ನ ಇಂತಹ ಬರಹಗಳ ಮೂರನೆಯ ಸಂಪುಟ. ಇದರಲ್ಲಿ ಹದಿನೇಳು ಜನರ ವ್ಯಕ್ತಿತ್ವ ಚಿತ್ರಣಗಳಿವೆ. ನಾನು ಬಾಲ್ಯದಲ್ಲಿ ನೋಡಿದವರು, ನನಗೆ ವೇದಪಾಠ ಹೇಳಿಕೊಟ್ಟವರು, ಜೊತೆಯಲ್ಲಿ ಕೆಲಸ ಮಾಡಿದ ಪತ್ರಕರ್ತರು, ಚಿತ್ರ ಕಲಾವಿದರು, ನಮ್ಮ ಕಾಲದ ರಸಿಕ ವಿದ್ವಾಂಸರು, ಪರ್ಯಾಯ ಚಿಕಿತ್ಸಕರು, ನಮ್ಮ ತಂದೆಯ ಓರಗೆಯವರು, ನಮ್ಮ ಮನೆಯ ಭಾಗವಾಗಿದ್ದವರು, ಪರಿವ್ರಾಜಕ ಮನೋಭಾವದ ಮಿತ್ರರು, ತಮ್ಮ ಸಾಹಿತ್ಯ-ಚಿಂತನೆಗಳಿಂದ ನನ್ನನ್ನು ರೂಪಿಸಿದವರು.... ಹೀಗೆ ಹಲವರಿದ್ದಾರೆ. ಇಂತಹ ಯಾರ ಲೋಪವನ್ನೂ ಎತ್ತಿ ತೋರಿಸುವುದು ಇಲ್ಲಿಯ ಆಶಯವಲ್ಲ. ಇಂಥವರ ಮೂಲಕ ನಮ್ಮ ಸಮಾಜವನ್ನು ಗ್ರಹಿಸುವುದು ಇಲ್ಲಿರುವ ಬಯಕೆ. ಇಲ್ಲಿ ಚಿತ್ರಣಗೊಂಡಿರುವವರೆಲ್ಲರೂ ನನ್ನ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಚೈತನ್ಯದಿಂದ ಬದುಕಿನ ಚೆಲುವು ವರ್ಧಿಸಿದೆ; ಜಗತ್ತು ಸ್ವಾರಸ್ಯವಾಗಿ ಕಂಡಿದೆ; ಮನುಷ್ಯಸ್ವಭಾವದ ಮೇಲಿನ ಕುತೂಹಲ ಹೆಚ್ಚಾಗಿದೆ.