ಕವನ ಸಂಕಲನಗಳ ಅಂಗಳದಲ್ಲಿ ಬಿರಿದ ಮಲ್ಲಿಗೆಯ ಘಮ ಸದಾ ಹೊಸತು. ರೋಹಿತ್ ನಾಗೇಶ್ ಹೆಸರು ಇದೀಗ ಹೊಸ ಸೇರ್ಪಡೆ. ದೂರದರ್ಶನ ಮತ್ತು ಸಿನಿಮಾ ಕಲಾವಿದರಾಗಿ ನಮ್ಮೆಲ್ಲರಿಗೂ ಪರಿಚಿತರಾಗಿರುವ ರೋಹಿತ್ ನಾಗೇಶ್ ಅವರು ಉದ್ಯಮಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುವ ಗುರುವೂ ಹೌದು. ಸಕಲೇಶಪುರದ ಹತ್ತಿರದ ವಿಶಾಲ ಹುಲ್ಲುಹಾಸು, ಗಗನಚುಂಬಿಸಿದಂತೆ ಕಾಣುವ ಗುಡ್ಡಗಳು, ಹಾಗೂ ಕಾಫಿ ಎಸ್ಟೇಟ್‌ಗಳ ಪರಿಸರದಿಂದ ಹೊರಟ ಅವರ ಬದುಕಿನ ಯಾನ, ಬೆಂಗಳೂರು ಹಾಗೂ ಅನೇಕ ದೇಶಗಳನ್ನು ಸುತ್ತುವ ಮೂಲಕ ಅವರನ್ನು ಗಟ್ಟಿಗೊಳಿಸಿದೆ. ಏಕಕಾಲಕ್ಕೆ ಅವರೊಳಗಿನ ಕವಿಯನ್ನೂ ಸಲಹಿದೆ. ಭಾವನೆಗಳ ಅಭಿವ್ಯಕ್ತಿಗೆ ಕವನ ರಚನೆ ಸರಳ ಮಾರ್ಗ. ಈ ಸರಳ ಮಾರ್ಗದಲ್ಲಿ ತಮ್ಮ ಮಾರ್ಗವನ್ನು ಹುಡುಕಿಕೊಂಡಿರುವ ರೋಹಿತ್ ನಾಗೇಶ್ ಅವರ ಕವಿತೆಗಳಲ್ಲಿ ಬದಲಾದ ಕಾಲ ಮತ್ತು ಗತಿಗಳನ್ನು ದಾಖಲಿಸಿದ ಸಾಲುಗಳಿವೆ. ಮನುಷ್ಯ ಸಹಜ ಭಾವನೆ ಮತ್ತು ಕಲ್ಪನೆಗಳ ಮೊತ್ತವಿದೆ. ರೋಹಿತರ ಈ ಚಾರಣ ಆರೋಹಣವಾಗಲಿ, ಮುಂದಿನ ದಿನಗಳಲ್ಲಿ ಅವರ ಭಾವ ಪ್ರಭಾವಳಿಯೊಳಗೆ ಇನ್ನಷ್ಟು ಅನುಭವ ಮತ್ತು ಕಲ್ಪನೆಗಳು ದಕ್ಕಲಿ, ಆ ಮೂಲಕ ಕಾವ್ಯಪ್ರಭೆ ಹೊರಹೊಮ್ಮಲಿ ಎಂದು ಆಶಿಸಿ ಶುಭಕೋರುತ್ತೇನೆ. ನಿಮ್ಮ ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರ ಸಾಹಿತಿ ನಿರ್ದೇಶಕರು