ಅಂಕಣ ಬರಹವೆಂದರೆ ಪದಗಳ ಮತ್ತು ಒಂದು ನಿರ್ದಿಷ್ಟ ಜಾಗದ ಚೌಕಟ್ಟು, ಆ ಚೌಕಟ್ಟಿನ ಮಿತಿಯೊಳಗೆ ದೀಕ್ಷಿತ್ ನಾಯರ್ ತಮ್ಮ ಚಿತ್ರಗಳನ್ನು ಕುಂದಿಲ್ಲದಂತೆ ಜೋಡಿಸುವ ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ಅಂಕಣ ಬರಹಗಳ ವಸ್ತು ವಿಷಯಗಳಲ್ಲಿ ವೈವಿಧ್ಯತೆಯಿದೆ, ಚಿಕಿತ್ಸಕ ಮನೋಭಾವವಿದ್ದಾಗ ಮಾತ್ರ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲೇ ಇಷ್ಟೊಂದು ವಿಚಾರಗಳು ಕಣ್ಣಿಗೆ ಬೀಳಬಹುದು. ಸರಾಗವಾಗಿ ಓದಿಸಿಕೊಳ್ಳುವ ಸರಳ ನಿರೂಪಣೆಯ ಈ ಅಂಕಣ ಬರಹಗಳಲ್ಲಿ ಬೌದ್ಧಿಕತೆಗಿಂತ ಭಾವುಕತೆ ಹೆಚ್ಚಾಗಿದ್ದರೂ, ಎಲ್ಲಾ ಬರಹಗಳಲ್ಲೂ ಮಾನವೀಯ ಅಂತಃಕರಣ ಮಿಡಿಯುತ್ತದೆ. ದೀಕ್ಷಿತ್ ಈ ಬರಹಗಳಲ್ಲಿ ಯುವ ಜನರಿಗೆ ಪ್ರೋತ್ಸಾಹದ ನುಡಿಗಳನ್ನಾಡುತ್ತಾರೆ, ಮಧ್ಯಮ ವರ್ಗದ ಬವಣೆಗಳಿಗೆ ಸಾಂತ್ವನ ಹೇಳುತ್ತಾರೆ, ಬಾಳ ಸಂಜೆಯಲ್ಲಿರುವವರ ಕುರಿತು ಕಾಳಜಿ ತೋರುತ್ತಾರೆ, ಬಾಳಿಗೆ ದಾರಿ ದೀಪವಾಗಬಲ್ಲ ಸಾಧಕರನ್ನು ಪರಿಚಯಿಸುವ ಮೂಲಕ ಬಿದ್ದವರು ಮತ್ತೆ ಮೇಲೇಳಬಹುದೆಂಬ ಭರವಸೆ ತುಂಬುತ್ತಾರೆ. ಇಲ್ಲಿ ಒಬ್ಬ ಮೃದು ಹೃದಯದ ಭಾವುಕ ಬರಹಗಾರನೂ, ವಸ್ತುನಿಷ್ಠ ಪತ್ರಕರ್ತನೂ, ಸ್ಪೂರ್ತಿ ತುಂಬಬಲ್ಲ ಮಾತುಗಾರನೂ ಒಟ್ಟಿಗೆ ಕಾಣಿಸುತ್ತಾರೆ. ತಾವು ಕೆಚ್ಚಿನಿಂದ ಕನ್ನಡ ಕಲಿತು, ದೀಕ್ಷಿತ್ ಬಾಲ್ಯದಿಂದಲೇ ಕನ್ನಡ ಭಾಷೆ ಮತ್ತು ಸಾಹಿತ್ಯದತ್ತ ಆಸಕ್ತರಾಗುವಂತೆ ಮಾಡಿದ ತಾತನವರ ಬಗ್ಗೆ ಅಭಿಮಾನ ಮೂಡಿತು.