ಕಾವ್ಯವು ಕಾಲಕಾಲದ ಅಗತ್ಯಗಳಿಗೆ ತಕ್ಕಂತೆ ತನ್ನ ಪ್ರಸ್ತುತಿಯಲ್ಲಿ ಬದಲಾವಣೆ ಮಾಡಿಕೊಂಡ ಒಂದು ಪ್ರಕಾರವೆನ್ನಬಹುದು. ಕವಿಯ ಕಲ್ಪನಾ ಯಾನದ ಅಭಿವ್ಯಕ್ತಿಯಾಗಿ ಮೂಡಿ ಬಂದ ಭಾವಗೀತೆಗಳ ಪರಂಪರೆಯನ್ನು ಹಾದು ನವ ಕವನಗಳು ವರ್ತಮಾನದ ಅನುಭೂತಿಯನ್ನು ದಕ್ಕಿಸಿಕೊಂಡರೂ ಇಂದಿಗೂ ಭಾವ ಗೀತೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ ತನ್ನ ಇರುವಿಕೆಗೆ ಭಾವ, ಲಯ, ಪ್ರಾಸವನ್ನು ಬಯಸುವ ಈ ಕವಿತೆಗಳು ಅದರ ಚೆಲುವು ಮತ್ತು ಗೇಯತೆಯ ಗುಣಗಳಿಂದಾಗಿ ಜನ ಸಾಮಾನ್ಯರನ್ನೂ ಒಲಿಸಿಕೊಳ್ಳುತ್ತದೆ. ಇಂತಹ ಗೇಯತೆಗೆ ಒಗ್ಗಿಕೊಳ್ಳುವ ಕವಿತೆಗಳಿಂದಾಗಿಯೇ ರೂಪಕಲಾ ಆಳರ 'ಜಗದ ಗೆಳತಿ' ಸಂಕಲನದ ಬಹಳಷ್ಟು ಕವಿತೆಗಳು ಈಗಾಗಲೇ ಜನಮನವನ್ನು ಗೆದ್ದುಕೊಂಡಿದೆ. ಅದು ಬರಿಯ ಭಾವ ಲಹರಿಯಾಗಿರದೆ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಬಹುದಾದ ಅಭಿನಂದನಾ ಗೀತೆಗಳು, ಸಾಂದರ್ಭಿಕ ಕವಿತೆಗಳು, ಆಶಯ ಗೀತೆಗಳಿಂದಾಗಿಯೂ ಬಹುಮುಖಿಯಾಗಿ ಸಮೃದ್ಧವಾಗಿದೆ. ಬೇರೆ ಬೇರೆ ಸಂಸ್ಥೆಗಳ ಉತ್ಸವಗಳಿಗೆಂದೇ ಬರೆದ ಹಾಡುಗಳೂ ಇವೆ. ಬಹಳಷ್ಟು ಕವನಗಳಲ್ಲಿ ಶುಭಹಾರೈಕೆಗಳು, ಹರಕೆಗಳು, ಮನೆಯ ಚಾವಡಿಯೊಳಗಿನ ಅನುನಯದ ಆಶೋತ್ತರಗಳು ಬಯಲಾಗಿವೆ. ಹುಟ್ಟು ಹಬ್ಬದ ದಿನ ಕನ್ನಡದಲ್ಲಿಯೇ ಶುಭ ಹಾರೈಸಬಹುದಾದ ಎರಡೆರಡು ಹಾಡುಗಳು 'ಹುಟ್ಟು ಹಬ್ಬಕ್ಕೆ ಹಾರೈಕೆ' ಮತ್ತು 'ಜನುಮ ದಿನದ ಹಾರೈಕೆ'ಯಾಗಿ ಮೂಡಿಬಂದಿದೆ. 'ಗೆದ್ದು ಬಾರೋ ವೀರ', 'ಎದ್ದೇಳು ಕನ್ನಡಿಗ', 'ಕನ್ನಡ ಮರ', 'ಹಣತೆ ಹಳ್ಳೋಣ ಬನ್ನಿ', 'ಜಗದ ಗೆಳತಿ, 'ಅಮ್ಮ ನೆನಪಾಗುತ್ತಾಳೆ', ಮುಂತಾದ ಕವನಗಳು ಆಯಾ ಸಂದರ್ಭದಲ್ಲಿ ಹಾಡಬಹುದಾದ ಕವಿತೆಗಳು, ಅವುಗಳನ್ನು ಬರಿಯ ಪುಸ್ತಕದೊಳಗಿನ ಅಕ್ಷರಗಳಾಗಿರಲು ಬಿಡದೆ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಎದೆಯ ಭಾವನೆಗಳನ್ನು ಹೃದಗೊಳಿಸುವ ಹಾದಿಯಲ್ಲಿ ಗೇಯಗೀತೆಗಳು ಬಯಸುವ ಪ್ರಾಸ ಲಯಗಳನ್ನು ಅರ್ಥಕ್ಕೆ ಚ್ಯುತಿ ಬರದಂತೆ ಹೊಂದಿಸಿಕೊಳ್ಳುವಲ್ಲಿ ಅವರ ಶ್ರಮ ಸಾರ್ಥಕವಾಗಬಹುದು.