nil
#
ವಿಮರ್ಶಾ ವಿವೇಕ ಇಲ್ಲದ ಬರಹಗಾರ ಅತ್ಯುತ್ತಮ ಸಾಹಿತ್ಯ ಸೃಚಿಸಲಾರ. ಕನ್ನಡದ ಯಾವುದೇ ಅತ್ಯುತ್ತಮ ಕವಿ ಅಥವಾ ಕಥೆಗಾರನ ಉದಾಹರಣೆ ತೆಗೆದುಕೊಂಡರೂ, ಅದರೊಳಗೊಬ್ಬ ಸಹೃದಯಿ ವಿಮರ್ಶಕ ಇಣುಕುತ್ತಿರುತ್ತಾನೆ. ಅತ್ಯುತ್ತಮ ಲೇಖಕ ಒಳ್ಳೆಯ ವಿಮರ್ಶಕನೂ ಮೀಮಾಂಸಕನೂ ಆಗಿರುವ ವಿರಳ ಉದಾಹರಣೆಗಳ ಸಾಲಿಗೆ ಸೇರುವಂತಿದೆ 'ವಾಸ್ತವ ಪ್ರತಿವಾಸ್ತವ' ಕೃತಿ ಕಥೆ, ಕವಿತೆ, ಪ್ರಬಂಧಗಳಿಂದ ಕನ್ನಡ ಸಾಹಿತ್ಯದ ದಿಗಂತಗಳನ್ನು ವಿಸ್ತರಿಸುತ್ತಲೇ ಇರುವ ಎಸ್. ದಿವಾಕರ್ ಅವರ ಈ ಕೃತಿ, ಓದಿನ ಹೊಳಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಸೃಜನಶೀಲ ಬರಹಗಾರನೊಬ್ಬನ ಮಹತ್ವಾಕಾಂಕ್ಷೆಯ ಅಭಿವ್ಯಕ್ತಿಯಂತಿದೆ. ಒಂದು ಒಳ್ಳೆಯ ಸಾಹಿತ್ಯ ಕೃತಿ ಅಥವಾ ಕಲಾಕೃತಿಯನ್ನು ಹೇಗೆ ನೋಡಬೇಕು ಎನ್ನುವ ಅರಿವನ್ನು ಸಹೃದಯರಲ್ಲಿ ಉದ್ದೀಪಿಸುವ ಬರಹಗಳಿವು, ದಿವಾಕರ್ ಅವರು ತಮ್ಮ ಬರಹಗಳಿಗೆ ಸಂಬಂಧಿಸಿದಂತೆ ಸಾಹಿತ್ಯ, ವಿಮರ್ಶೆ ಮತ್ತು ಸಂಸ್ಕೃತಿ ಎನ್ನುವ ವಿಶೇಷಣಗಳನ್ನು ಬಳಸಿದ್ದಾರಾದರೂ, 'ವಿಮರ್ಶೆ' ಅಥವಾ ಸಂಸ್ಕೃತಿ ಚಿಂತನೆ' ಎನ್ನುವಂಥ ಹಣೆಪಟ್ಟಿಗಳ ಚೌಕಟ್ಟಿಗೆ ನಿಲುಕದಿರುವುದು ದಿವಾಕರ್ ಬರಹಗಳ ಅನನ್ಯತೆ, ವಿಮರ್ಶೆಯ ಪಾರಿಭಾಷಿಕ ಚೌಕಟ್ಟು ಹಾಗೂ ಚಿಂತನೆಯ ಸೋಗಿನ ಗಾಂಭೀರ್ಯದಿಂದ ಮುಕ್ತವಾದ ಈ ಬರಹಗಳು ಸಾಹಿತ್ಯದ ಮೂಲಕ ಜೀವನಸೌಂದರ್ಯ ಕಾಣಬಯಸುವವರಿಗೆ ರಸದ ಒರತೆಗಳಂತಿದೆ; ಕನ್ನಡ ಹಾಗೂ ವಿಶ್ವಸಾಹಿತ್ಯದ ಅತ್ಯುತ್ತಮ ಕೃತಿ ಹಾಗೂ ಮನಸ್ಸುಗಳನ್ನು ಪರಿಚಯಿಸುತ್ತಿವೆ. ದಿವಾಕರ್ ಬರವಣಿಗೆಯ ವಿಶಿಷ್ಟ ಲಕ್ಷಣವಾದ ಹಾಗೂ ಅವರಿಗಷ್ಟೇ ಸಾಧ್ಯವಾದ ಪ್ರಯೋಗಶೀಲತೆ ಈ ಸಂಕಲನದ ಬರಹಗಳಲ್ಲೂ ಇದೆ. ಓದುಗರನ್ನು 'ಪುಸ್ತಕದ ಓಣಿ'ಗಳಲ್ಲಿ ಕೈ ಹಿಡಿದು ನಡೆಸುವಂತಿರುವ ಈ ಬರಹಗಳು. ಸಾಹಿತ್ಯಪ್ರವೇಶದ ಕಿಂಡಿಗಳನ್ನೂ ಕಂಡಿಗಳನ್ನೂ ಸಹೃದಯರಿಗೆ ಕರುಣಿಸುವಂತಿವೆ. ವಿಮರ್ಶೆ ಹಾಗೂ ಚಿಂತನೆ ವಿರಳವಾಗಿರುವ ದಿನಗಳಲ್ಲಿ ಎರಡಕ್ಕೂ ಘನತೆ ತಂದುಕೊಡುವ ಪ್ರಯತ್ನದ ರೂಪದಲ್ಲಿ ದಿವಾಕರ್ ಅವರ 'ವಾಸ್ತದ ಪ್ರತಿವಾಸ್ತವ' ಕೃತಿಗೆ ವಿಶೇಷ ಮಹತ್ವವಿದೆ. ರಘುನಾಥ ಚ.ಹ.