Nil
ಅಸಲಿಗೆ ಹೃದಯವೆಂದರೆ ಏನು? ಪ್ರೀತಿ, ದ್ವೇಷ, ಕೋಪ-ತಾಪ, ಆಘಾತ ಎಲ್ಲವನ್ನೂ ಯಾಕೆ ಹೃದಯಕ್ಕೆ ಸಮೀಕರಿಸುತ್ತೇವೆ? ‘ಅವನು ಬಹಳ ಹೃದಯವಂತ ಬಿಡಲೇ’ ಎಂದು ಮೆಚ್ಚುಗೆಯಿಂದ ಮಾತನಾಡುವ ನಾವು ‘ತೀರಾ ನೊಂದ ಹೃದಯ ಕಣೋ ಅವಳದ್ದು!’ ಎಂದೂ ಉದ್ಗಾರ ತೆಗೆಯುತ್ತೇವೆ. ಅಂದರೆ ಒಂದು ಮುಟಿಗೆಯಷ್ಟಿರುವ ಅದು ಕೇವಲ ರಕ್ತ-ಮಾಂಸದ ಮುದ್ದೆ ಅಲ್ಲ. ನಾವು ಎದುರಿಸುವ ಎಲ್ಲ ಆಘಾತಗಳ ‘ಶಾಕ್ ಅಬ್ಬರ್ವರ್’ ಅದು. ಹೃದಯವೆಂದರೆ ಮನಸ್ಸು ಕೂಡ ಹೌದು. ನಮ್ಮ ಇಡೀ ದೇಹದ ‘ಜೀವ’ ಭದ್ರವಾಗಿರುವುದು ಈ ಕವಾಟದಲ್ಲಿ. ಮನಸ್ಸು ಮತ್ತು ಹೃದಯ ಒಂದೇ ದೇಹದ ಎರಡು ಮುಖಗಳು. ಮನಸ್ಸು ಕುದ್ದು ಹೋದರೆ ಹೃದಯವೆಂದೂ ಹಿರಿಹಿರಿ ಹಿಗ್ಗುವುದಿಲ್ಲ. ನಮ್ಮ ಭಾವಕ್ಕೆ ಧಕ್ಕೆಯಾದರೆ ಅದರ ನೇರ ಪರಿಣಾಮ ಬೀರುವುದು ಹೃದಯದ ಮೇಲೆ, ಒಬ್ಬ ಕವಿ ಹೃದಯಕ್ಕೆ ರಮ್ಯತೆಯ ಪ್ರಭಾವಳಿಯನ್ನು ತೊಡಿಸುತ್ತಾನೆ. ಅದು ಸದಾ ನೆಮ್ಮದಿಯ ಗೂಡಾಗಿರಲಿ ಎಂದು ಅದನ್ನು ಪ್ರೀತಿಯಿಂದ ಅದ್ದಿ ತೆಗೆಯುತ್ತಾನೆ. ಆದರೆ ಒಬ್ಬ ವೈದ್ಯ ಅದರ ಕವಾಟದಲ್ಲಿ ಸರಿಯಾಗಿ ರಕ್ತದ ಚಲನೆ ನಡೆಯುತ್ತಿದೆಯೇ ಎಂದು ನೋಡುತ್ತಾನೆ. ಅದಕ್ಕೆ ಯಾವುದೇ ರೀತಿಯಲ್ಲಿ ಆಘಾತವಾಗದಂತೆ ವಹಿಸಬೇಕಾದ ಎಚ್ಚರಿಕೆಗಳನ್ನು ಸೂಚಿಸುತ್ತಾನೆ. ಹಾಗೆ ನೋಡಿದರೆ ಇಬ್ಬರದ್ದೂ ಚಿಕಿತ್ಸಕ ದೃಷ್ಟಿಕೋನವೇ ಆಗಿದೆ.