‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಾತ್ರ ಚಿಕ್ಕದಿರಲಿ – ದೊಡ್ಡದಿರಲಿ ಮೂಲ ಕಥಾವಸ್ತುವಿನೊಂದಿಗೆ ನ್ಯಾಯಯುತ ಸಾವಯವ ಸಂಬಂಧವನ್ನು ಹೊಂದಿರುವುದು ಕಾದಂಬರಿಯ ಬಂಧದ ಒಂದು ವಿಶೇಷ.