ಅಂತಾರಾಷ್ಟ್ರೀಯ ಕುಂಬಳಕಾಯಿ

Original price was: ₹ 120.Current price is: ₹ 102.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight 0.4 kg
Author
Page Nos
ISBN
Publications
(1 customer review)

SYNOPSIS

ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ. ಮತ್ತೆ ಈ ಕತೆಗಳಲ್ಲಿರುವ ಅರಿವಿನ ಆಳ ತಲ್ಲಣಗೊಳಿಸುವಂಥದು. ಆ ತಲ್ಲಣವನ್ನು ಉಪಶಮನಗೊಳಿಸುವಂತಿದೆ ಒಳಗೇ ಪ್ರವಹಿಸುವ ವಿನೋದಪ್ರಜ್ಞೆ. ವಿವರಗಳಿಂದ ಪರಿಚಿತವಾಗಿದ್ದೂ ಗುರುತು ಹತ್ತದ ಪರಿಣಾಮ ಉಂಟುಮಾಡುವ ಈ ಕತೆಗಳಲ್ಲಿ ಕನಸುಗಳಿಗಿರುವ ಮನವೊಲಿಸುವ ಶಕ್ತಿಯಿದೆ.

ABOUT AUTHOR

ಅಬ್ದುಲ್ ರಶೀದ್ (ಜನನ 1965) ಒಬ್ಬ ಬರಹಗಾರ, ಕವಿ, ಸಂಪಾದಕ ಮತ್ತುಅನುವಾದಕ. 2004 ರಲ್ಲಿ ಅವರು ಜೀವಮಾನದ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು

Opinion of Others

  1. Sudha Adukal

    Sudha AdukalWriter

    ಅಂತರಾಷ್ಟ್ರೀಯ ಕುಂಬಳಕಾಯಿಯ ಗಾಯಬ್ ಕಹಾನಿ.... ಕರಾವಳಿಯಲ್ಲಿ ತಡವಾಗಿಯಾದರೂ ಬಿರುಮಳೆ ಸುರಿದು, ಇಡಿಯ ಊರೇ ಜಲಮಯವಾಗಿರುವ ಹೊತ್ತು ಅಂತರಾಷ್ಟ್ರೀಯ ಕುಂಬಳಕಾಯಿಯೊಂದು ಬೇಕಿತ್ತು ಎಂದೆನಿಸತೊಡಗಿತು. ಬಯಸಿದ್ದು ಬೆರಳ ತುದಿಯಲ್ಲಿ ದಕ್ಕುವ ಕಾಲದಲ್ಲಿ ಕುಂಬಳಕಾಯಿಯೇನು ಮಹಾ? ಎಂದು ಆರ್ಡರ್ ಒತ್ತಿಯಾಯಿತು. ಅಲ್ಲಿಂದ ಇಲ್ಲಿಗೆ ಕುಂಬಳಕಾಯಿ ಉರುಳಿ ಬರುತ್ತಿರುವ ಸುದ್ದಿಯನ್ನು ಪ್ರತಿದಿನವೂ ಜಂಗಮವಾಣಿ ನೀಡತೊಡಗಿತು. ಇನ್ನೇನು ಕಾಲೇಜಿನಿಂದ ಮನೆಸೇರುವ ಹೊತ್ತು ಮನೆಬಾಗಿಲಲ್ಲಿ ಕುಂಬಳಕಾಯಿ ಬಂದಿರುತ್ತದೆ ಎನ್ನುತ್ತಾ ಮನೆಗೆ ಬಂದರೆ ಕುಂಬಳಕಾಯಿಯ ಬದಲು ಬಾಗಿಲಿಗೆ ಪತ್ರವೊಂದು ನೇತಾಡುತ್ತಿತ್ತು. ಬಿರುಮಳೆಯಲ್ಲಿ ಕಿವಿಗೆ ಕೇಳುವಾಣಿಯ ಗುಂಡಿಯನ್ನು ಸಿಕ್ಕಿಸಿ, ಸಂಗೀತ ಕೇಳುತ್ತಾ ಕಾದಂಬರಿಯಲ್ಲಿ ಕಳೆದುಹೋದ ಕುಮಾರಕಂಠೀರವನಿಗೆ ಬಾಗಿಲ ಬೆಲ್ಲಿನ ಸದ್ದು ಕೇಳದೇಹೋಗಿದ್ದರಿಂದ. ಪೋಸ್ಟ್ ಆಫೀಸಿಗೇ ಬಂದು ಕುಂಬಳಕಾಯಿ ಪಡೆದುಕೊಳ್ಳುವುದು ಎಂದು ಪತ್ರದಲ್ಲಿತ್ತು. ಮರುದಿನ ಹೋಗಿ ವಿಚಾರಿಸಿದಾಗ ಇಲ್ಲಿ ಕುಂಬಳಕಾಯಿಯನ್ನು ಇಟ್ಟುಕೊಳ್ಳಲಾಗದು, ಹೆಡ್ ಆಫೀಸಿನಲ್ಲಿ ವಿಚಾರಿಸಿ ಎಂದು ಕೈತೊಳೆದುಕೊಂಡರು. ಮಳೆಯಲ್ಲಿ ಮುದ್ದೆಯಾದ ಆ ಪತ್ರವನ್ನು ಮತ್ತೆ ಜಾಗ್ರತೆಯಲ್ಲಿ ಮಡಚಿ, ರಾತ್ರಿಯಿಡೀ ಕುಂಬಳಕಾಯಿಯ ಕನಸು ಕಂಡಾಗಿತ್ತು. ಮರುದಿನ ಛಲಬಿಡದ ತ್ರಿವಿಕ್ರಮನಂತೆ ಹೆಡ್ ಆಫೀಸಿನ ಬಾಗಿಲು ತಟ್ಟಿ, ಮುದ್ದೆಯಾದ ಪತ್ರವನ್ನು ತೋರಿಸಲಾಗಿ, ಎಲ್ಲ ಕಡೆಗೆ ಹುಡುಕಿ ಸಿಗದೇ ಸಿಬ್ಬಂದಿಯೂ ಕಂಗಾಲಾದರು. ಪಾರ್ಸಲ್ ಅಂತಿದೆ, ಏನಮ್ಮಾ ಅದು? ಎಂದವರ ಪ್ರಶ್ನೆಗೆ ಏನಿಲ್ಲ ಸರ್, ಕುಂಬಳಕಾಯಿ ಎಂದು ಗೊಣಗುತ್ತಿದ್ದಂತೆ ಕೋಣೆಯನ್ಮು ಇನ್ನೊಮ್ಮೆ ಹುಡುಕಿಬಂದವರು ಇಲ್ಲವೇ ಇಲ್ಲ ಎಂದು ಘೋಷಿಸಿದರು. ಇನ್ನು ಸಂಘರ್ಷ ಅನಿವಾರ್ಯವೆಂದು ನಾನೂ ಸ್ವಲ್ಪ ದನಿಯೇರಿಸಿ, ಅದು ಅಂತಿಂತ ಕುಂಬಳಕಾಯಿಯಲ್ಲ, ಅಂತರಾಷ್ಟ್ರೀಯ ಕುಂಬಳಕಾಯಿ, ಅದಿಲ್ಲದೇ ಇಲ್ಲಿಂದ ಕದಲಲಾರೆ ಎಂದು ಸತ್ಯಾಗ್ರಹ ಸಾರಲಾಗಿ, ಕಿರುಜಂಗಮವಾಣಿಯಲ್ಲಿ ಬ್ರಾಂಚ್ ಆಫೀಸಿಗೆ ಫೋನು ಮಾಡಿದ ಸಿಬ್ಬಂದಿ ಕಪಾಟೊಂದರ ಬಾಗಿಲು ತೆರೆದು, ಪುಟ್ಟ ಕವರನ್ನು ಕೈಗಿಡುತ್ತಾ, ಏನು ಮಹಾ ಕುಂಬಳಕಾಯಿ ನಿಮ್ದು! ಪುಸ್ತಕ ಅಂತ ಹೇಳಿದ್ರೆ ಗಂಟೇನ್ರೀ ಹೋಗ್ತಿತ್ತು. ನಾನು ಕುಂಬಳಕಾಯಿ ಅಂತ ತಿಳಿದು ದೊಡ್ಡ ಪಾರ್ಸೆಲ್ ಅಷ್ಟೇ ನೋಡ್ತಿದ್ದೆ ಎಂದು ಕೆಕ್ಕರಿಸಿದರು. ಕುಂಬಳಕಾಯಿ ಸಿಕ್ಕ ಖುಶಿಯಲ್ಲಿ, ಇರಲಿಬಿಡಿ ಸರ್, ಸಿಗ್ತಲ್ಲ. ತಾಂಕ್ಯೂ ಎನ್ನುತ್ತಾ ಮನೆಗೆ ಹೊರಟಾಯಿತು. ಅಂತರಾಷ್ಟ್ರೀಯ ಕುಂಬಳಕಾಯಿ ರಶೀದ್ ಅವರ ಹೊಸಕತಾಸಂಕಲನ. ಹದಿನೈದು ದಿನಗಳಲ್ಲಿ ಅವರು ಬರೆದ ಐದು ಕತೆಗಳು ಇಲ್ಲಿವೆ. ಈ ಮೊದಲು ದ್ವೀಪವಾಸಿಯಾಗಿರುವ ಅವರು ಬರೆದ ಲಾರ್ಡ್ ಕಾರನವಾಲೀಸ್ ಮತ್ತು ರಾಣಿ ಎಲಿಜೆಬೆತ್ ಕತಾಸಂಕಲನ ಓದಿದ್ದೆ. ಅದರಲ್ಲಿ ಬರುವ ಅಕ್ಕಚ್ಚು ಕತೆ ನನ್ನ ಅಚ್ಚುಮೆಚ್ಚಿನ ಕತೆಗಳಲ್ಲೊಂದು. ಈ ಸಂಕಲನದ ಮೂರು ಕತೆಗಳನ್ನು ಪತ್ರಿಕೆಗಳಲ್ಲಿ ಈಗಾಗಲೇ ಓದಿದ್ದೆನಾದರೂ ಮತ್ತೊಮ್ಮೆ ಕುಳಿತು ಓದಿದೆ. ಕೆಲವು ಕತೆಗಳನ್ನು ಓದುವಾಗ ಆಗಾಗ ಬೇಡವೆಂದರೂ ನಗು ಉಕ್ಕುಕ್ಕಿ ಬರುತ್ತಿತ್ತು. ಒಬ್ಬಳೇ ನಗಲು ಕಾರಣವೇನಿರಬಹುದೆಂದು ಅಚ್ಚರಿಗೊಂಡ ಮಗನಿಗೆ ಕೆಲವು ಭಾಗಗಳನ್ನು ಓದಿ ಹೇಳಿದ್ದಾಯಿತು. ನಾಳೆ ಅವನೂ ಇಡಿಯ ಸಂಕಲನ ಓದಿಮುಗಿಸುವ ಮುನ್ಸೂಚನೆಯೂ ಸಿಕ್ಕಿತು. ಕತೆಯೆಂದರೆ ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿಟ್ಟು ಅವನ ಸುತ್ತಮುತ್ತಲೂ ನಡೆಯುವ ಘಟನೆಗಳ ಮೂಲಕ ಏನಾದರೊಂದು ಆಶಯವನ್ನು ಕಟ್ಟಿಕೊಡುವ ನಿರೂಪಣೆಯೆಂಬ ಸಿದ್ದಸೂತ್ರಗಳಾಚೆಗೆ ಇಲ್ಲಿನ ಕತೆಗಳು ಜಿಗಿಯುತ್ತವೆ. ಅಲೆಮಾರಿಯೊಬ್ಬ ತನ್ನ ಹಿಂದೆ ನಮ್ಮನ್ನು ಕರೆದೊಯ್ದು ಕಾಲ, ದೇಶಗಳ ಮಿತಿಯನ್ನು ಮೀರಿ ಚಲಿಸುತ್ತಾ, ನಮ್ಮನ್ನು ಚಲಿಸುವಂತೆ ಮಾಡುತ್ತಾ ಒಂದಿಷ್ಟು ಲೋಕವನ್ನು ನಮ್ಮೆದುರು ತೆರೆದಿಟ್ಟು, ಏನನ್ನೂ ಸೂತ್ರೀಕರಿಸುವ ಗೋಜಿಗೆ ಹೋಗದೇ ನಿರ್ಲಿಪ್ತನಾಗಿ ಸಾಗಿದಂತ ಅನುಭವವನ್ನು ಈ ಕತೆಗಳ ಓದು ನೀಡಿತು. ಲೋಕ ನೋಡುವ ಬಗೆಯನ್ನು ತಿಳಿಸುವ ಕಿಂದರಿಜೋಗಿಯ ಪಾತ್ರ ಇಲ್ಲಿಯ ನಿರೂಪಕನದ್ದು. ಹಾಗಾಗಿ ಇಲ್ಲಿಯ ಯಾವ ಕತೆಗಳಿಗೂ ತಾರ್ಕಿಕ ಅಂತ್ಯಗಳಿಲ್ಲ. ಹಾಗೆಂದು ಅವು ನಮ್ಮೊಳಗೆ ಹುಟ್ಟಿಸುವ ಕಂಪನ ಕಡಿಮೆಯೇನಲ್ಲ. ಕತೆ ಮುಗಿದರೂ ನಮ್ಮೊಳಗೆ ಮತ್ತೆ ಬೆಳೆಯುತ್ತಲೇ ಇರುವುದು. ಇಲ್ಲಿಯ ಪಾತ್ರಗಳೆಲ್ಲವೂ ಅಪ್ಪಟ ವಾಸ್ತವ ಲೋಕದವು, ಆದರ್ಶಗಳ ಜಂಜಡಕ್ಕೆ ಬೆನ್ನು ತಿರುಗಿಸಿದಂತವು. ನಿರೂಪಕ ಕೂಡಾ ಒಬ್ಬ ಸಾಮಾನ್ಯ ಜೀವಿ. ಹಾಗಾಗಿಯೇ ಮಾನವಸಂಕುಲದ ಮನದಾಳದ ಕತೆ, ವ್ಯಥೆಗಳೆಲ್ಲವನ್ನೂ ಅವು ಧರಿಸಬಲ್ಲವು. ಕಾಮ್ರೇಡ್ ಅಲಿ ರೈಟರ ಕೆಂಪು ಕಾರಿಡಾರು ಬಹಳ ಕಾಡುವ ಕತೆ. ಕಾರ್ಮಿಕ ಹೋರಾಟ, ಹೆಣ್ಣಿನ ಸಹಜ ಆಕಾಂಕ್ಷೆಗಳು, ಕನಸು ಮತ್ತು ವಾಸ್ತವದ ನಡುವಿನ ಬೇಲಿಗಳು, ಮನುಷ್ಯ ಸಂಬಂಧದ ನ್ಯೂನತೆಗಳು ಎಲ್ಲವನ್ನೂ Wittyಯಾಗಿ ನಿರೂಪಿಸುವ ಭಾಷೆಯ ಸೊಗಸು ವಿಷಾದ ಮತ್ತು ನಗುವನ್ನು ಒಟ್ಟಿಗೇ ಉಕ್ಕಿಸುತ್ತದೆ. ಮಿಲಿಟರಿ ಕಂಬಳಿ ಹೊದ್ದು ಸೈನಿಕರ ಗುಂಡಿಗೆ ಬಲಿಯಾಗುವ ಕರಡಿ ಬಹಳ ಕಾಡುತ್ತದೆ. ಮಾಂಟೆನಿಗ್ರೋದ ರೂಪದರ್ಶಿ, ದ್ವೀಪವಾಸಿಯಾದ ಕೀಯಾಂಬಿ, ರೈಟರ್ ಆಲಿಯ ಮಗಳು ಖತೀಜಾ, ಲೆಸ್ಬಿಯನ್ ಕಾರ್ತ್ಯಾಯಿನಿ, ಅವಳ ಪ್ರೇಯಸಿ ಕ್ರಿಸ್ತೀನಾ, ಕವಿಸಾಮ್ರಾಟದ ಅವಳು, ಕುಂಬಳಕಾಯಿಯಲ್ಲಿ ಬರುವ ಶಹನಾಜ್ ಹಾಗೂ ಸೈನಿಕನ ಹೆಂಡತಿ.... ಹೆಂಗಳೆಯರ ಲೋಕದ ವಿವಿಧ ಪ್ರತಿನಿಧಿಗಳಂತೆ ಕಾಣುತ್ತಾರೆ. ಎಲ್ಲ ಕತೆಗಳಲ್ಲಿಯೂ ಬರುವ ನಿರೂಪಕ ಆದರ್ಶದ ಮುಖವಾಡವನ್ನು ಬದಿಗಿರಿಸಿ ಶುದ್ಧ ಲೌಕಿಕದ ದರ್ಶನ ಮಾಡಿಸುತ್ತಾನೆ. ಆತ ತೋರುವ ಜಗತ್ತು ನಮದೆಂದೂ, ಅಲ್ಲೆಲ್ಲೋ ನಾವು ಕನಸಿನಲ್ಲಿ ಸುತ್ತಾಡಿದ್ದೆವೆಂದೂ ಅನಿಸುವಂತೆ ಮಾಡುವುದರಲ್ಲಿಯೇ ಕತೆಗಳ ಸಾರ್ಥಕ್ಯವಿದೆ ಎನಿಸುತ್ತದೆ. ಇಡಿಯಾಗಿ ಓದಿಯಾದ ಮೇಲೆ ಕತೆಗಳು ಯಾವ ವಿಷಯವನ್ನು ಹೇಳುತ್ತವೆ? ಎಂದು ಕೇಳಿದರೆ ಉತ್ತರಕ್ಜಾಗಿ ತಡಕಾಡಿ, ಕತೆ ಓದಿ, ನಿಮಗೇ ತಿಳಿಯುತ್ತದೆ ಎಂದು ಹೇಳಬೇಕೆನಿಸುತ್ತದೆ. ಇದನ್ನೇ ಎಸ್ ದಿವಾಕರ್ ಅವರು ಮುನ್ನುಡಿಯಲ್ಲಿ ಅಮೇರಿಕನ್ ಲೇಖಕಿ ಪ್ಲಾನೆರಿ ಹೇಳಿರುವ ಮಾತುಗಳನ್ನು ಉಲ್ಲೇಖಿಸುವ ಮೂಲಕ ಹೇಳಿದ್ದಾರೆ. ಒಂದು ಕತೆಯ ಅರ್ಥ ಆ ಕತೆಯೊಳಗೇ ಅಂತರ್ಗತವಾಗಬೇಕು.... ಕಾಲಿಗೆ ಚಕ್ರ ಕಟ್ಟಿಕೊಂಡಿರುವ ರಶೀದ್ ಪಟ್ಟಾಗಿ ಕುಳಿತಾಗಲೆಲ್ಲ ನೂರಾರು ಕತೆಗಳು ಅವರೊಳಗಿಂದ ನುಗ್ಗಿಬಂದು ಕಾಗದಕ್ಕಿಳಿದು ಅವರನ್ನು ಮಾತ್ರ ಮತ್ತೆ ಏಕಾಂಗಿಯಾಗಿಸಿ ಹೊರಡುತ್ತವೆಯಂತೆ. ವರ್ಷಕ್ಕೊಮ್ಮೆಯಾದರೂ ಹೀಗೆ ಕುಳಿತುಕೊಳ್ಳುವ ಶಾಪವನ್ನು ದುಷ್ಟದೇವತೆಗಳು ಅವರಿಗೆ ನೀಡುತ್ತಿರಲಿ ಎಂದು ಮನೆದೇವತೆಯಾದ ಚೌಡಿಯನ್ನು ಪ್ರಾರ್ಥಿಸಿ ಶುಭಂ...

  2. Vasudhendra

    VasudhendraRenowned Author

    ವೈವಿಧ್ಯ ಪಾತ್ರಗಳ ಸೂಕ್ಷ್ಮ ಚಿತ್ರಣ... ಹಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿನ ಬಫೆಗಳಲ್ಲಿ "ನಿಮ್ಮ ಸಲಾಡ್ ನೀವೇ ತಯಾರಿಸಿ ಕೊಳ್ಳಿ" ಎಂದು ಬರೆದ ಬೋರ್ಡ್ ಲಗತ್ತಿಸಿ, ಹಲಚು ತರಕಾರಿ, ಹಣ್ಣು ಮತ್ತು ಬೇಯಿಸಿದ ಕಾಳುಗಳ ಕಚ್ಚಾವಸ್ತುಗಳನ್ನು ಕಣ್ಣು ಕೋರೈಸುವಂತೆ ಇಟ್ಟಿರುತ್ತಾರೆ. ಅತಿಥಿಗಳು ತಮ್ಮ ರುಚಿಗೆ ತಕ್ಕಂತೆ ಬೇಕಾದ ಖಾದ್ಯವನ್ನು ತಾವೇ ತಯಾರಿಸಿ ಸವಿಯಬಹುದು. ರಶೀದರ ಈ ವಿಶೇಷ ಕಥಾಸಂಕಲನದ ಕತೆಗಳೂ ಸಾಂಪ್ರದಾಯಿಕ ಕಥನದ ಚೌಕಟ್ಟು ಬಿಡಿಸಿಕೊಂಡು ನಮ್ಮ ಮುಂದೆ ಹೀಗೆಯೇ ನಿಲ್ಲುತ್ತವೆ. ರಶೀದರಿಗೆ ಕಥನಕ್ಕಿಂತಲೂ ಪಾತ್ರಗಳ ಕುರಿತ ಕಾಳಜಿ ಹೆಚ್ಚು. ಪ್ರತಿಯೊಂದು ಪಾತ್ರದ ಸೂಕ್ಷ್ಮ ಸಂಗತಿಗಳನ್ನು ಗಮನಿಸಿ ದಾಖಲಿಸುವ ಶಕ್ತಿ ಅವರಿಗೆ ದಕ್ಕಿದೆ. ಅವರ ಪ್ರವಾಸ ಪ್ರಬಂಧಗಳಲ್ಲೂ ಈ ಸ್ವಭಾವ ಗೋಚರಿಸುತ್ತದೆ. ಇಲ್ಲಿ ಪ್ರತಿ ಕತೆಯಲ್ಲೂ ಓದುಗರಿಗೆ ಹತ್ತಾರು ವಿಭಿನ್ನ ಪಾತ್ರಗಳು ದಕ್ಕುತ್ತವೆ. ಅವುಗಳ ನಡುವೆ ಘಟಿಸುವ ಕೆಲವು ಘಟನೆಗಳೂ ಇವೆ. ಆದರೆ ಅದನ್ನು ಒತ್ತಾಯಪೂರ್ವಕವಾಗಿ ಒಂದು ಚೌಕಟ್ಟಿಗೆ ಸೇರಿಸುವ ಹಟವಿಲ್ಲ. ಒಂದು ರೀತಿಯಲ್ಲಿ ಅವು ಹಲವು ಬಣ್ಣ, ಪರಿಮಳ, ರೂಪ ಹೊಂದಿರುವ ಹೂಗುಚ್ಚದಂತೆ ಕಾಣುತ್ತವೆ. ಒತ್ತಾಯವಾಗಿ ನಿಯಮಬದ್ಧತೆಯಿಂದ ಕಟ್ಟಿದ ಹೂಮಾಲೆಯಲ್ಲ. ಹೈಸ್ಕೂಲಿನ ಪರೀಕ್ಷೆಯ ಹೊಂದಿಸಿ ಬರೆಯಿರಿ ಪ್ರಶ್ನೆ ನೆನಪಿದೆಯಲ್ಲವೆ? ಇವೂ ಅಂತಹದೇ ಕತೆಗಳು. ಆದರೆ 'ಎ' ಪಟ್ಟಿಯ ಯಾವುದೇ ಪ್ರಶ್ನೆಗೆ 'ಬಿ' ಪಟ್ಟಿಯ ಯಾವುದೋ ಉತ್ತರದೊಡನೆ ಹೊಂದಿಸಿದರೂ ಅದು ಸರಿ ಹೊಂದುತ್ತದೆ. ಒಂದು ಕತೆಯ ಪಾತ್ರದೊಡನೆ ಮತ್ತೊಂದು ಕತೆಯ ಪಾತ್ರ ಜೋಡಿಸಿ ಓದಿದರೂ ಒಳ್ಳೆಯ ಕತೆ ದಕ್ಕುತ್ತದೆ. ಐದೂ ಕತೆಗಳ ನಿರೂಪಕ ಒಂದೇ ಸ್ವಭಾವದ, ಹೆಚ್ಚು ಪ್ರತಿಷ್ಟೆ ತೋರಿಸಿಕೊಳ್ಳದ, ಯಾವುದನ್ನೂ ಅತಿ ಭಾವುಕವಾಗಿಸದ, ಹುಡುಗುತನದ, ತುಸು ಉಡಾಫೆಯ, ಸಾಕಷ್ಟು ಹಾಸ್ಯಪ್ರಜ್ಞೆಯ ವ್ಯಕ್ತಿ. ರಶೀದರನ್ನು ಬಲ್ಲವರಿಗೆ ಆ ಪಾತ್ರವನ್ನು ಕಣ್ಮುಂದೆ ತಂದುಕೊಳ್ಳುವುದು ಕಷ್ಟವಲ್ಲ. ಕವಿತೆಯನ್ನು ಅರಿತವರು ಮಾತ್ರ ಬಳಸಬಹುದಾದ ಸುಕೋಮಲ ಭಾಷೆ ಇಲ್ಲಿನ ಕತೆಗಳದು. ತಮ್ಮ ಮುಸ್ಲಿಂ ಧರ್ಮವನ್ನೇ ಮುನ್ನೆಲೆಗೊಡ್ಡಿ, ಅದರ ಮೂಲಕ ಓದಿಕೊಳ್ಳಿ ಎಂಬ ರಿಯಾಯಿತಿ ರಶೀದ್ ಬೇಡುವುದಿಲ್ಲ. ಮನುಷ್ಯ ಸ್ವಭಾವ ಬಲ್ಲ ಯಾರಿಗಾದರೂ ತಟ್ಟುವ ಪಾತ್ರಗಳನ್ನು ಪರಿಚಯಿಸುವುದು ಅವರಿಗೆ ಗೊತ್ತು. ಆದ್ದರಿಂದ ಈ ಕತೆಗಳಿಗೆ ಸೀಮೆಗಳಿಲ್ಲ. 70 ಪುಟಗಳ ಸೀಮಿತ ಪಠ್ಯದ ಈ ಕಥಾಸಂಕಲನದ ಪಾತ್ರಗಳು ನಿಮ್ಮನ್ನು ಹಲವು ದಿನಗಳ ಕಾಲ ಕಾಡಬಲ್ಲವು. ಒಂದೊಳ್ಳೆಯ ಓದು.

  3. Shubhashree Bhat

    Shubhashree BhatAuthor

    "ಅಂತರಾಷ್ಟ್ರೀಯ ಕುಂಬಳಕಾಯಿ" ಲೇಖಕರು-ಅಬ್ದುಲ್ ರಶೀದ್ ಈ ಪುಸ್ತಕದ ಶೀರ್ಷಿಕೆ ಅನಾವರಣಗೊಂಡಾಗ ಬಹಳ ಕುತೂಹಲದಿಂದ ರಶೀದ್ ಸರ್ ಅವರಲ್ಲಿ ಕೇಳಿದ್ದೆ ಇದರ ಅರ್ಥವೇನೆಂದು, 'ಪುಸ್ತಕ ಓದು ಆಗ ಗೊತ್ತಾಗ್ತದೆ' ಅಂದಿದ್ದರು. ಯಾವುದೋ ತಮಾಷೆಯ ಕಥೆಯಿರಬಹುದೆಂಬ ಕಲ್ಪನೆಯಲ್ಲಿಯೇ ನಾನಿದ್ದೆ. ಎಂದಿನಂತೆಯೇ ಪುಸ್ತಕ ಸಿಕ್ಕೊಡನೆ ಶೀರ್ಷಿಕೆ ಕಥೆಯನ್ನು ಓದಬೇಕು ಅನಿಸಿದರೂ ಸರದಿ ಪ್ರಕಾರ ಕಥೆಯನ್ನು ಆಸ್ವಾದಿಸತೊಡಗಿದೆ. 'ಹೊತ್ತು ಗೊತ್ತಿಲ್ಲದ ಕಥೆಗಳು' ಪುಸ್ತಕದಲ್ಲಿ ಹೇಗೆ ಉಮ್ಮಾನನ್ನೂ, ಬಾಲ್ಯವನ್ನೂ, ಕೊಡಗನ್ನೂ ಆಪ್ತವಾಗಿ ಕಟ್ಟಿಕೊಟ್ಟಿದ್ದರೋ ಹಾಗೆಯೇ ಲಕ್ಷದ್ವೀಪವನ್ನೂ ಚೆಂದವಾಗಿ ಚಿತ್ರಿಸಿದ್ದಾರೆ. ವಾಸ್ತವ ಬದುಕಿನ ಹುಡುಕಾಟ, ತಲ್ಲಣ, ತಳಮಳಗಳು, ವಂಚನೆ, ಪ್ರೀತಿ, ಕ್ರೌರ್ಯ ಎಲ್ಲವೂ ಸರಳವಾಗಿ ಮಿಳಿತಗೊಂಡು ಕಥೆಗಳಾಗಿವೆ. ಶೀರ್ಷಿಕೆಯ ಕಥೆಯಂತೂ ಭಾವುಕರನ್ನಾಗಿಸಿ ಮನಸಿನಲ್ಲುಳಿದು ಕಾಡುವಂತಹ ಕಥೆ. ಹದಿನೈದು ದಿನದ ಅವಧಿಯಲ್ಲಿ ಇಷ್ಟೆಲ್ಲ ಚೆಂದದ ಕಥೆ ಬರೆಯುವುದಾದರೆ ಮತ್ಮತ್ತೆ ಇಂತಹ ಚಾಲೆಂಜ್ ಅನ್ನು ಲೇಖಕರು ತೆಗೆದುಕೊಳ್ಳಬೇಕು ಎಂದು ನಮ್ಮ ವಿನಂತಿ.

  4. Arif Raja

    Arif RajaJournalist

    *ಸಧ್ಯ ವಿಮರ್ಶೆಯ ಪರಿಭಾಷೆಯಲ್ಲಿ ನಾನೇನನೂ ಹೇಳಲಾರೆ..* ಸರ್ ನಿಮ್ಮ ಹೊಸ ಸಂಕಲನ '#ಅಂತರಾಷ್ಟ್ರೀಯ_ಕುಂಬಳಕಾಯಿ' ಈಗ ತಾನೇ ಓದಿ ಮುಗಿಸಿದೆ. ಒಂದು ವಾರದ ಅಂತರದಲ್ಲಿ ನನಗೆ ಬೇಕಾದಾಗ ಒಂದೊಂದು ಕತೆಗಳನ್ನು ಓದುತ್ತಾ ಹೋದೆ. ಎಂದಿನಂತೆ ನಿಮ್ಮ ಬರಹದ ಅಗಾಧ‌ ಶಕ್ತಿ ಮತ್ತದರ ಅನೂಹ್ಯ ಕಂಪನ ಎದೆಗೆ ಇಳಿಯುತ್ತಾ ಹೋಯಿತು.ನಿಜಕ್ಕೂ ಇದನ್ನು ಹೇಗೆ ವಿವರಿಸುವುದು ತಿಳಿಯುತ್ತಿಲ್ಲ.ಯಾವುದೋ ಮಹಾಸ್ವಪ್ನವೊಂದರ ಮೈಮರೆವಿನ ಮೈಅರಿವಿನ ಅರೆಗಳಿಗೆಯ ತುಣುಕುಗಳಲ್ಲಿ ನಾನೂ ಸಮಪಾಲುದಾರನಾಗಿ ಭಾಗವಹಿದಂತೆ ಅನುಭವಾಯಿತು ಎಂದು ಮಾತ್ರ ಹೇಳಬಲ್ಲೆ.ಎಲ್ಲೆಲ್ಲಿ ಅಕ್ಷರಗಳು ಓದುಗರ ಕಣ್ಣ‌ಮುಂದಿನಿಂದ ಮೆಲ್ಲಗೆ ಸರಿದು ಮಸುಕಾಗಿ ಕೊನೆಗೆ ಮಾಯವಾಗಿ ಹೋಗುತ್ತವೋ ಅಲ್ಲೆಲ್ಲಾ ನಿಮ್ಮ ಬರವಣಿಗೆಯ ಯಶಸ್ಸು ಇದೆ.ಸದ್ಯಕ್ಕೆ ವಿಮರ್ಶೆಯ ಪರಿಭಾಷೆಯಲ್ಲಿ ನಾನೇನನೂ ಹೇಳಲು ಹೋಗುವುದಿಲ್ಲ.ಸೂಕ್ಷ್ಮ ಸಂವೇದನೆಯ ಯಾರೂ ಓದಿದರೂ 'ಇದು ನನಗೆ ಬಿದ್ದ ಕನಸು; ನನಗೆ ಮಾತ್ರ ದಕ್ಕಿದ ತಲ್ಲೀನತೆ!' ಅನಿಸುವುದೇ ನಿಮ್ಮ ಕಥನ ಕಲೆಯ ಹೆಚ್ಚುಗಾರಿಕೆ ಕುವೆಂಪು,ಲಂಕೇಶ್,ದೇವನೂರು,ಆಲನಹಳ್ಳಿ,'ಬುಗುರಿ'ಯ ಮೊಗಳ್ಳಿ ಗಣೇಶರ ನಂತರ ನಮ್ಮಲ್ಲೂ ಕೂಡ ಒಬ್ಬ 'ಬೂಕರ್ ಪ್ರೈಜ಼್' ಪಡೆಯುವ ಎಲ್ಲಾ ಅರ್ಹತೆಯುಳ್ಳ ಗದ್ಯ ಲೇಖಕ‌ ಇದ್ದಾನೆ.ಅದು ನಿಸ್ಸಂಶಯವಾಗಿಯೂ ಅಬ್ದುಲ್ ರಷೀದ್‌! ಆದರೆ ಮನಸು ಮಾಡಬೇಕಷ್ಟೇ!! ಆದರೆ ಮೇಲಿನ‌ ಐವರು ಬೂಕರ್ಗಿಂತಲೂ ಘನವಾದದ್ದನ್ನು ದೊಡ್ಡದನ್ನು ಈಗಾಗಲೇ ಸೃಷ್ಟಿಸಿ ಹೋಗಿದ್ದಾರೆ.. - Arif Raja (ವಿಶಿಷ್ಟ ಸೂಚನೆ: ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ.ತಮ್ಮ ತಕರಾರುಗಳೇನಿದ್ದರೂ ತಾವು ದಾಖಲಿಸಲು ಮುಕ್ತರು)

  5. Ranjit Kavalapaara

    Ranjit KavalapaaraWriter

    'ಅಂತರಾಷ್ಟ್ರೀಯ ಕುಂಬಳಕಾಯಿಯೊಂದಿಗೆ' ‌ ವಾಸ್ತವವನ್ನು ಒಪ್ಪಿಕೊಂಡು ಬರೆಯತೊಡಗಿದರೆ ಮಾತ್ರ ಕಥೆಗಳನ್ನು ನಿಜವೆಂಬಂತೆ ಸೃಷ್ಟಿಸಲು ಸಾಧ್ಯ. ಹಾಗೆ ಕಥೆಗಳನ್ನು ಸೃಷ್ಟಿಸಬೇಕಾದರೆ ಕಥೆಗಾರ ಕಥೆ ಬರೆಯುವ ಮುನ್ನವೂ ಬರೆಯುವಾಗಲೂ ಹಾಗೂ ಬರೆದಾದ ನಂತರವೂ ಆತ ಮನುಷ್ಯ ಅನ್ನುವುದನ್ನು ಮರೆಯದಂತೆ ಎಚ್ಚರ ವಹಿಸಬೇಕಾಗುತ್ತದೆ. ಕಥೆಗಾರನೂ ಮನುಷ್ಯನೂ ಆತನ ಆಲೋಚನ ಕ್ರಮಗಳೂ ಪರಸ್ಪರ ತಿಕ್ಕಾಟ ನಡೆಸಿ ಅದರಿಂದ ಹೊರಹೊಮ್ಮುವ ಕಥೆಗಳು ಮನುಷ್ಯರಿಗೆ ಹತ್ತಿರವಾಗುತ್ತದೆ. ದೌರ್ಬಲ್ಯ, ಸಾಮರ್ಥ್ಯ, ಸಣ್ಣತನ ದೊಡ್ಡತನ, ಕೌರ್ಯ, ಅನುಕಂಪ, ತುಂಟತನ, ಗಂಭೀರತೆ ಎಲ್ಲವೂ ಮನುಷ್ಯರಲ್ಲಿ ನಮ್ಮಲ್ಲಿ, ನಿಮ್ಮಲ್ಲಿ ಇರುತ್ತದೆ. ಅದಿಲ್ಲದೇ ಇದ್ದರೆ ಆತನನ್ನು ಮನುಷ್ಯ ಅನ್ನಲು ಸಾಧ್ಯವೇ ಆಗುವುದಿಲ್ಲ. ಅಂತಹ ಮನುಷ್ಯ ಸೃಷ್ಟಿಸುವ ಪಾತ್ರಗಳು ಕೂಡ ಈ ಮನೋಸಹಜಗುಣಗಳ ಹೊರತಾಗಿ ಇದ್ದಾಗ ಅದು ರುಚಿಸುವುದಿಲ್ಲ. ಇಲ್ಲಿ ಕಥೆಗಾರ ಅಬ್ದುಲ್ ರಶೀದರು ಅಪ್ಪಟ ಮನುಷ್ಯರೂ ಹಾಗೂ ಏಕಕಾಲದಲ್ಲಿ ಕಥೆಗಾರರೂ ಆಗಿರುವುದರಿಂದ ಅವರು ಸೃಷ್ಟಿಸುವ ಪಾತ್ರಗಳು ಮನೋಸಹಜಗುಣಗಳ ದಿಗ್ಭಂಧನವನ್ನು ಮೀರಿ ನಮಗೆ ಅತಿಮಾನುಷ ಅನ್ನಿಸುವುದಿಲ್ಲ. ಕೆಲವೊಮ್ಮೆ ಓದುವಾಗ ಇದು ನನ್ನದೇ ಲೋಕ ಎಂದು ಅನ್ನಿಸಿ ಬಿಡುತ್ತದೆ. ಚಲಿಸುವ ರೈಲಿನ ಕಿಟಕಿಯಿಂದಲೇ ಗಮನಿಸಿ ಬರೆದಂತೆ ಅನ್ನಿಸುವ 'ಕಾರ್ತ್ಯಾಯಿನಿ' ಕಥೆಯನ್ನೂ ಜೊತೆಗೆ 'ಅಂತರಾಷ್ಟ್ರೀಯ‌‌ ಕುಂಬಳಕಾಯಿ' ಕಥಾಸಂಕಲನದಲ್ಲಿರುವ ಉಳಿದ ಕಥೆಗಳನ್ನೂ ನಾನು ಸ್ವತಃ ಲೇಖಕರನ್ನು ಕಂಡು ಮೈಸೂರಿನಿಂದ-ಸುಂಠಿಕೊಪ್ಪಕ್ಕೆ ಕೆಂಪುಬಸ್ಸಿನಲ್ಲಿ ಬರುವಾಗಲೇ ಓದಿ ಮುಗಿಸಿ ಈಗ ಇದನ್ನು ಇಲ್ಲಿ ಬರೆಯುತ್ತಿದ್ದೇನೆ. ಕೆಂಪು ಬಸ್ಸು, ಬಿಸಿಲು, ಜನರು, ಅವರ ಬೆವರು, ಕಿರಿಕಿರಿ, ಪಕ್ಕದಾ ಸೀಟಿನಲ್ಲಿ ಕುಳಿತಿದ್ದ ತುಂಟ ಬಾಲಕನ ಆಟಾಟೋಪ, ಮಗುವಿನ ತಾಯಿಯ ಅಸಹನೆ ಇದೆಲ್ಲದರ ನಡುವೆ ನಾನು ಏಕಾಗ್ರತೆಯನ್ನು ಕಳೆದುಕೊಳ್ಳದೆ ಇಡೀ ಕೃತಿಯನ್ನು ಓದಿದ್ದೇನೆ ಎಂದರೆ ನನಗೆ ನೀವು ಶಹಬಾಶ್ ಹೇಳಲೇ‌ ಬೇಕು. ಅಸಲಿಗೆ ನೀವು ಶಹಬಾಶ್ ಗಿರಿಯನ್ನು ರಶೀದರಿಗೆ ಕೊಡಬೇಕು. ಹಾಗೆ ಪಟ್ಟು ಹಿಡಿದು‌ ಓದುವಂತೆ ಕಥೆ ಬರೆದದ್ದು ಅವರ ಸಾಮರ್ಥ್ಯ. ಈ ಕೃತಿಯ ಕೊನೆಯ‌ ಕಥೆ 'ಅಂತರಾಷ್ಟ್ರೀಯ ಕುಂಬಳಕಾಯಿ' ಮುಗಿಯುವುದಕ್ಕೂ ನಮ್ಮ ಬಸ್ಸು ಕೊಡಗಿನಲ್ಲಿ ಬೌದ್ಧ ಸನ್ಯಾಸಿಗಳ ನಾಡೆಂದು ಪ್ರಸಿದ್ಧವಾಗಿರುವ ಕೊಪ್ಪ (ಟಿಬೇಟ್ ಕ್ಯಾಂಪ್) ತಲುಪುದಕ್ಕೂ ಕಾಕತಾಳೀಯ ಅನ್ನುವಂತೆ ಸಮಯ ಸರೀ ಆಯ್ತು. ಈ ಬೌದ್ಧ ಸನ್ಯಾಸಿಗಳ ಕುರಿತು ನಾನು ಲಂಕೇಶರು ಬರೆದಿದ್ದ ಲೇಖನ ಒಂದನ್ನು ಇತ್ತೀಚೆಗೆ ಓದಿದ್ದೆ. ಅವರೂ ಹಾಗೂ‌ ಪೂ.ಚ ತೇಜಸ್ವಿ ಅವರು ಅಲ್ಲಿಗೆ ಭೇಟಿ ನೀಡಿದ ಅನುಭವ ಲೇಖನ ಅದಾಗಿತ್ತು. ಆದರೇ‌ ಕುಂಬಳ ಕಾಯಿ ಕಥೆಯಲ್ಲಿ ಬೌದ್ಧ ‌ಧರ್ಮಕ್ಕೆ ಸಜ್ಜಾಗುತ್ತಿರುವ(ಸಜ್ಜುಮಾಡಲಾಗುತ್ತಿರುವ) ಮೂವರು ಎಳಸು ಮಕ್ಕಳ ಅಪಹರಣ ಪ್ರಸಂಗವನ್ನು ನಾವು ಕಥೆಯ ರೂಪದಲ್ಲಿ ಓದಬಹುದು. ರಶೀದರ ಕಥೆಗಳಲ್ಲಿ ಕಥೆಯ ಕೇಂದ್ರ ಪಾತ್ರಗಳನ್ನು ಗುರುತಿಸುವುದು ಬಹಳಾ ಕಷ್ಟ. ಸಂಕಲನದ ಮೊದಲ ಕಥೆ 'ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರ'ಗಳಲ್ಲಿ ನಾನು ಗಮನಿಸಿದಂತೆ ಶಿಕ್ಷೆಯೊಂದರಿಂದ ತಪ್ಪಿಸಿಕೊಳ್ಳಲು ಹುಚ್ಚನಂತೆ ನಟಿಸುವ ಮುತ್ತುಕೋಯಾ ಹಾಗೂ ಅವನ ನಿಜವಾಗಿಯೂ ಅರೆಹುಚ್ಚು ಹೆಂಡತಿ ಕೀಯಾಂಬಿ ಪಾತ್ರಗಳು ಕಥೆ ಮುಗಿಯುತ್ತಿದ್ದಂತೆ ಮನಸ್ಸಿನಲ್ಲಿ ಕುಳಿತು ಬಿಡುತ್ತದೆ. ಮಾಂತ್ರಿಕ ವಿದ್ಯೆ ಅರಿತಿರುವ ಅಪ್ಪಟ ಮನುಷ್ಯನೂ ಆಗಿರುವ ಮದುವೆ ಆಗದ ಸನ್ಯಾಸಿಯೂ ಅಲ್ಲದ ವೃದ್ಧ ಕಥೆಗಾರ ಮುಕ್ತಿಯಾರರ ಪಾತ್ರ ಕಾಡುತ್ತದೆ. ತನ್ನ ಕಳೆದುಹೋದ ಅವಳಿ ಸಹೋದರನನ್ನು ಹುಡುಕಿಕೊಡುವಂತೆ ಕಥೆಗಾರನ ಬೆನ್ನು ಬೀಳುವ ವಿದೇಶಿ ರೂಪದರ್ಶಿಯ ಕುರಿತು ಮರುಕ ಹುಟ್ಟುತ್ತದೆ. ಕಥೆಯಲ್ಲಿ ಕಥೆಗಾರ ಕಡಲ ನೀರು ಇಳಿದಾಗ ಅಂಗಾತ ಬಿದ್ದುಕೊಳ್ಳುವ ನಕ್ಷತ್ರ ಮೀನುಗಳಿಗೂ ಕೆರೆಯ ತಾವರೆಗೂ ನೀಡಿರುವ ಹೋಲಿಕೆ ಸರಿ ಎಂದು ಬಲವಾಗಿ ಅನ್ನಿಸಲು ತೊಡಗುತ್ತದೆ. ****** ಮಡಿಕೇರಿಯ ಟೋಲ್‌ಗೇಟ್ ಸರ್ಕಲ್ ಬಳಿಯ ಪೆಟ್ರೋಲ್ ಬಂಕಿನಲ್ಲೇ ವಾರಕ್ಕೆರಡು ಬಾರಿ ಪೆಟ್ರೋಲ್ ಹಾಕಿಸುವ ನನಗೆ ಕಾಮ್ರೇಡ್ ಆಲಿ ರೈಟರು ಅದೇ ಸ್ಥಳದಿಂದ ರಾಮ ಬಸ್ ಹತ್ತಿ ಬಹಳಾ ಅಸಹಾಯಕತೆಯಿಂದ ಮರಳುವಾಗ ಈ ಕಥೆಗಾರನಿಗೂ ಆತನನ್ನು ಪಾರು ಮಾಡಲು ಸಾಧ್ಯವಾಗಿಲ್ಲವಲ್ಲಾ ಅಂತ ತೀವ್ರವಾಗಿ ಅನ್ನಿಸಿ ಭಾಮಂಡಲದ ಕೋಪಟ್ಟಿಯ ಸನಿಹದಲ್ಲೇ ಇರುವ ತೀಪಟ್ಟಿಮಲೆಗೆ ಹೋಗಿ 'ನಿಮ್ಮ ಓಡಿಹೋಗಿರುವ ಮಗಳನ್ನು ನಾನು ಹುಡುಕಲು ಸಹಾಯ ಮಾಡಲೆ ರೈಟರೇ' ಎಂದು ಹೇಳಬೇಕು ಅನ್ನಿಸುತ್ತಿದೆ. ಅವರ ಬಾಲ್ಯಕಾಲದ ಸಮಸ್ಯೆ ಒಂದರಂತೆ ನನ್ನ ತಲೆಯೊಳಗೂ ಕೋಳಿಮರಿಯೊಂದು ಹೊಕ್ಕಿ ತಲಹರಟೆ ಮಾಡುತ್ತಾ ಕಾಡುವಾಗಲೇ ಕಥೆ ಅಂತ್ಯವಾಗುತ್ತದೆ ‌ ****** ಮಸಾಜ್ ಮಾಡುವ ಬಲಿಷ್ಠ ಅಂಗೈಯ ಆ ಹುಡುಗಿಯ ಪ್ರೇಯಸಿ ಕ್ರಿಸ್ತ ಹಾಗೂ ಅವಳ ನಡುವಿನ ವಿವರಿಸಲಾಗದ ಸಂಬಂಧ ಕೊರಗುವಂತೆ ಮಾಡುತ್ತದೆ. ಹತ್ತನೇ ನಂಬರಿನ ಫುಟ್ಬಾಲ್ ಆಟಗಾರನ ಮಡದಿ ಕಣ್ಣಮುಂದೆ ಕಾಣುತ್ತಾಳೆ. ಅವಳ ಮಗಳ ಅಸಂಬದ್ಧ ಪ್ರೇಮ ಪ್ರಕರಣವೂ ನಮಗೆ ಅಯ್ಯೋ ಅನ್ನಿಸತೊಡಗುತ್ತದೆ. ನನಗೆ ಯಾಕೋ ಈ ಕಥೆ ಓದುವಾಗ ರಶೀದರ ಹಳೆಯದೊಂದು ಕಥೆ 'ಪ್ರಾಣ ಪಕ್ಷಿ' ಕಥೆ ತಲೆಗೆ ಹೊಕ್ಕಿ ಆ‌ಕಥೆಯ ಬುರ್ಕಾಧಾರಿ ವೇಶ್ಯೆ ಕಥಾಪಾತ್ರದ ತಮ್ಮ,ಪುಟ್ಟ ಹುಡುಗ ಆ ಸುಂದರಿ ಅಕ್ಕನ ಹಿಂದೆ ಹಿಂದೆಯೇ ನಡೆದು ಹೋಗುವಂತೆ ನಾನು ಈ ಕಥೆಯ ಹಿಂದೆ ಹಿಂದೆಯೇ ಹೋಗುತ್ತಿದ್ದೇನೆ ಅನ್ನಿಸತೊಡಗಿತ್ತು. ಕಥೆಯ ಕೊನೆಯಲ್ಲಿ ಬಚ್ಚಿಡಬೇಕಿದ್ದ ಕೃತಕ ಪುರುಷ ಜನನಾಂಗವೊಂದು ಸಮಾಜದ ಕಣ್ಣಿಗೆ ಬಿದ್ದು ಉಂಟಾಗುವ ನಿರ್ವಿಕಾರ ಭಾವ ಉಳಿದು ಬಿಟ್ಟಿತು. ಕಥೆಗಾರ ಕಥೆಹೇಳುತ್ತಾ ಕೊನೆಯಲ್ಲಿ ಆತ ಏನೂ ಮಾಡಲಾಗದ ಅಸಹಾಯಕ ಮನುಷ್ಯನಂತೆ ಎಲ್ಲವನ್ನೂ ನೋಡಿ ನಿಂತುಕೊಳ್ಳಲಷ್ಟೇ ಸಾಧ್ಯ ನನಗೂ ನಿಮ್ಮಂತೆ ಅಂತ ಓದುಗನಿಗೆ ಹೇಳಿ ಸುಮ್ಮನಾಗುತ್ತಾರೆ. ಇನ್ನು ನಾವೂ ಇಲ್ಲಿ ನಿಸ್ಸಾಹಯಕರೇ... ****** ಅಂತರಾಷ್ಟ್ರೀಯ ಕುಂಬಳಕಾಯಿಯಲ್ಲಿ ದೌರ್ಜನ್ಯಕ್ಕೊಳಗಾಗುವ ಮಾಜೀ ಸೈನಿಕನ ಹೆಂಡತಿ, ಕವಿಯೂ ಪೊಲೀಸು ಆಗಿ 'ಅಂತರಾಷ್ಟ್ರೀಯ ಕುಂಬಳಕಾಯಿ' ಜಾಲದಲ್ಲಿ ಒದ್ದಾಡುವ ಎಎಸೈ, ಎಲ್ಲವನ್ನೂ ಫೋಟೋ ತೆಗೆಯುತ್ತಾ ಮತ್ತೇನೂ ಮಾಡಲಾಗದ ಫೋಟೋಗ್ರಾಫರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧ್ಯಕ್ಷೇಯ ಸಮಾಜದ ವಿರುದ್ಧ ಸಿಡಿಮಿಡಿಗೊಳ್ಳುವ ಪರೀ ಹಾಗೂ ಏನೂ ಅರಿವಿಲ್ಲದೆ ತಪ್ಪಿಸಿಕೊಳ್ಳಲೂ ಆಗದೇ ಮರಳಿ ಯಥಾಸ್ಥಿತಿಗೆ ಮರಳುವ ಮೂರು ಮಕ್ಕಳು ಎಲ್ಲರೂ ನನ್ನ ತಲೆಯಲ್ಲೀಗ ಕೋಳಿಮರಿಯೊಂದರಂತೆ ಮೆದುಳಿಗೆ ಹೊಕ್ಕು ಕಿರಿಕಿರಿ ಮಾಡುತ್ತಿದ್ದಾರೆ ರಶೀದರ ಕಥೆಗಳು ನನಗೆ ಈ ಹಿಂದೆಯೂ ಸಾಕಷ್ಟು ಕಿರಿಕಿರಿ ಮಾಡಿದೆ. ಕಥೆಗಳು ಓದಿ ಆದ ನಂತರವೂ ಹೀಗೆ ತಲೆಯೊಳಗೆ ಹೊಕ್ಕು ಕೀಟಲೇ ಮಾಡುತ್ತಿರಬೇಕು. ಇದು ಅಪ್ಪಟ ಮನುಷ್ಯರ ಕಥೆಗಳು ಹಾಗಾಗಿ ಇದನ್ನು ಭಯವಿಲ್ಲದೇ, ಆತಂಕವಿಲ್ಲದೆ ನೀವೂ ಓದಬಹದು. - ರಂಜಿತ್ ಕವಲಪಾರ

  6. Shobha Rao

    Shobha RaoAuthor

    ಒಂದೂರಿನಲ್ಲಿ ಅಂತ ಶುರುವಾಗಿ ಸುಖವಾಗಿದ್ದರು ಎನ್ನುವಲ್ಲಿಗೆ ಮುಗಿಯುತ್ತಿದ್ದ ಕತೆಗಳನ್ನು ಕೇಳುವಾಗ, ಓದುವಾಗ ಎಲ್ಲಾ ಕತೆ ಮುಗಿಯುವುದು ಸುಖದಲ್ಲಿ ಹಾಗೂ ಮುಗಿಯಬೇಕಾಗಿದ್ದು ಹಾಗೆ ಎಂದು ನಂಬಿಕೊಂಡಿದ್ದು ಅದೆಷ್ಟು ವರ್ಷಗಳೋ. ಆದರೆ ಈ ಕತೆಗಳ ಶುರು ಎಲ್ಲಿ, ಮುಕ್ತಾಯವೇ ಇಲ್ಲವಲ್ಲ ಇವಕ್ಕೆ ಅನ್ನಿಸಿದ್ದು ಇವರ ಕತೆಗಳನ್ನು ಓದುವಾಗ. ಸಶಕ್ತ ಕತೆ ಮುಗಿಯುವುದಿಲ್ಲ ಅದು ಬೆಳೆಯುತ್ತಲೇ ಹೋಗುತ್ತದೆ ಎಂದಿದ್ದರು ಒಬ್ಬ ಹಿರಿಯರು. ಆಗ ಆ ಹೀಗೆಲ್ಲಾ ಇರುತ್ತಾ ಅನ್ನಿಸಿದ್ದು ಈಗ ನಿಜ ಅನ್ನುವುದು ಅರ್ಥವಾಗತೊಡಗಿದೆ. ಈ Abdul Rasheed ರ ಕಥಾ ಪ್ರಪಂಚವೇ ವಿಭಿನ್ನ. ಇಲ್ಲಿ ಯಾವುದೂ ಕಲ್ಪನೆಯ ಪಾತ್ರಗಳಿರುವುದಿಲ್ಲ. ಕತೆ ಹೇಳುತ್ತಾ ಹೇಳುತ್ತಾ ತಾನೂ ಪಾತ್ರವಾಗುತ್ತಾ ಹೋಗುವ ಒಂದು ತಾದಾತ್ಮ್ಯ ಒಳಗೊಳ್ಳುವಿಕೆ ಇವರಿಗಿದೆ. ತಟ್ಟನೆ ಎದ್ದು ಬರುವ ಚಾಣಾಕ್ಷತೆ ಕೂಡ ಇದೆ. ತಾನು ನೋಡಿದ್ದು ಮಾತ್ರವೇ ಹೇಳುವ ಇವರ ಗುಣದಿಂದಾಗಿ ಇದರಲ್ಲಿ ಒಂದು ರೀತಿಯ ಜೀವಂತಿಕೆ ಕಾಣಿಸುತ್ತದೆ. ಅಂತಾರಾಷ್ಟ್ರೀಯ ಕುಂಬಳಕಾಯಿ ಸಹ ಇಂತಹುದೆ ಕತಾ ಸಂಕಲನ. ಲಕ್ಷದ್ವೀಪದ ದ್ವೀಪದಲ್ಲಿ ಶುರುವಾಗುವ ಕತೆ ಖಂಡಾಂತರ ದಾಟಿ ಅಲೆಮಾರಿತನ ಅಪ್ಪಿಕೊಳ್ಳುತ್ತದೆ. ಏನನ್ನೋ ಹುಡುಕಲು ನಿರ್ಧರಿಸಿ ಹೊರಟು ಇನ್ನೇನೋ ಸಿಕ್ಕು ಅದು ಮತ್ತೇನೋ ಕತೆ ಹೇಳಿ ಅರೆ ಇವರು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆ ಅನ್ನಿಸುವ ಹೊತ್ತಿಗೆ ಮತ್ತೆ ಅಲ್ಲಿಗೆ ಬಂದು ನಿಲ್ಲುವ ಇವರ ಕತೆಗಳಲ್ಲಿ ಅಲೆಮಾರಿತನದಷ್ಟೆ ಗಾಢವಾದ ವಿಷಾದ, ಯಾವುದರದ್ದೋ ಹುಡುಕಾಟ, ಅದರಿಂದ ಎದುರಾಗುವ ಪೇಚಾಟ, ಇದ್ದಕ್ಕಿದ್ದ ಹಾಗೆ ಕಳೆದುಹೋಗುವ ವಿಷಣ್ಣತೆ, ಭಾವುಕತೆ, ಬದುಕಿನ ಸಹಜ ನಾಟಕಗಳು, ಮನುಷ್ಯ ಜೀವಿಯ ಹುಸಿ ನಡುವಳಿಕೆಗಳು, ತಣ್ಣನೆಯ ಕ್ರೌರ್ಯ ಪರಿಚಯಿಸುತ್ತಲೇ ಎದುರಿಗಿದ್ದ ನೀಲ ಸಮುದ್ರ ದಾಟಿದರೆ ಮಾತ್ರವೇ ನೆಲ ಸಿಗುತ್ತದೆ ಎನ್ನುವ ಹಾಗೆ ಇವೆಲ್ಲವನ್ನು ಅನುಭವಿಸುತ್ತಲೇ ಬದುಕಬೇಕು ಎನ್ನುವ ಸತ್ಯ ತಿಳಿಸಿ ಎದ್ದು ನಡೆಯಬೇಕು ಎಂದು ನೇರವಾಗಿ ಹೇಳದೆಯೇ ದಾಟಿಸಿಬಿಡುತ್ತಾರೆ. ಸಣ್ಣ ಪುಟ್ಟ ಸಂಗತಿಗಳೂ ಎಷ್ಟು ಜೀವಂತಿಕೆ ತುಂಬಿಕೊಂಡಿವೆ ಅನ್ನಿಸಿ ಒಂದು ನಿರಾಳತೆ ಒದಗಿಸಿ ಬಿಡುತ್ತದೆ. ರಶೀದ್ ಅವರ ಶಕ್ತಿ ಅವರ ಭಾಷೆ ಹಾಗೂ ಹೇಳುವ ಕಲೆ. ಅವರು ಬಳಸುವ ರೂಪಕಗಳು ಸದಾ ಅಚ್ಚರಿ. ಯಾವುದೇ ಕ್ಲಿಷ್ಟ ಪದಗಳ ಬಳಸಿ ದೊಡ್ಡಸ್ತಿಕೆ ತೋರಿಸದೆ ಸರಳವಾಗಿ ಹೇಳುವ ಭಾಷೆಯೇ ಎಷ್ಟು ಚೆಂದ ಅನ್ನಿಸುವ ಹಾಗೆ ಮಾಡುತ್ತಾರೆ. ಅಷ್ಟೂ ಭಾವಗಳಲ್ಲಿ ಏಕಕಾಲದಲ್ಲಿ ತೊಯ್ಯಿಸಿ ಬಿಡುತ್ತಾರೆ. ಇವರ ಕತೆಗಳಿಗೆ ಅಂತ್ಯವಿಲ್ಲ. ಅದು ಓದುಗರಲ್ಲಿ ಬೆಳೆಯುವ ಶಕ್ತಿ ಉಳಿಸಿಕೊಂಡೆ ಮುಗಿಯುವ ಸೂಚನೆ ಕೊಡುತ್ತದೆ. ಎಷ್ಟೋ ಬಿಂದುಗಳನ್ನು ಒಂದುಗೂಡಿಸಿ ಒಂದು ಚೆಂದದ ಚಿತ್ರ ರಚಿಸಿಬಿಟ್ಟಿರುತ್ತದೆ. ಮುಂದೆ ಎಂದೋ ಇನ್ನು ಯಾವುದೋ ಕತೆಯಾಗುವ ಸ್ವಾತಂತ್ರ್ಯ ತನ್ನಲ್ಲೇ ಉಳಿಸಿಕೊಂಡಿರುತ್ತದೆ. ಇದು ಚೌಕಟ್ಟು ಮೀರಿದ ಕತೆಗಳಾ, ಚೌಕಟ್ಟಿನೊಳಗೆ ನಮ್ಮನ್ನೂ ಸೇರಿಸಿಕೊಂಡ ಕತೆಗಳಾ ಎನ್ನುವ ಪ್ರಶ್ನೆ ಉಳಿಸಿಕೊಂಡೆ ಈ ಮನುಷ್ಯ ತನ್ನ ಪರಮ ಆಲಸಿತನ ಬಿಟ್ಟು ಬರೆಯಲಿ, ಆ ಬುದ್ಧಿ ಪಂಜುರ್ಲಿ ಇವರ ಮನೆ ದೇವರು ನಿಂಗಮ್ಮಜ್ಜಿ ಕೊಡಲಿ ಎಂದು ಹಾರೈಸುತ್ತೇನೆ. ಕಾದಂಬರಿ ಬರವಣಿಗೆ ಶುರುವಾಗಲಿ ಅದರ ಮೊದಲ ಕಾಪಿ ನನಗೆ ಸಿಗಲಿ ಎಂಬ ದುರಾಸೆ ಕೂಡ.. - ಶೋಭಾರಾವ್

Customer Reviews

1 review for ಅಂತಾರಾಷ್ಟ್ರೀಯ ಕುಂಬಳಕಾಯಿ

  1. ಮಹೇಶ್ ಹೆಗಡೆ ಹಳ್ಳಿಗದ್ದೆ

    ಪುಸ್ತಕ ಓದಿದ್ದೇನೆ. ಎಲ್ಲ ಕಥೆಗಳೂ ಚೆನ್ನಾಗಿವೆ. ರಶೀದ್ ಅವರ ಪುಸ್ತಕಗಳಲ್ಲಿ ಇದು ನಾನು ಓದಿದ ಮೊದಲ ಪುಸ್ತಕ. ಹದಿನೈದು ದಿನಗಳಲ್ಲಿ ಐದು ಕತೆ ಬರೆದು ಒಂದು ಸಾಹಸ ಮಾಡಿದ್ದಾರೆ.

Add a review

Your email address will not be published. Required fields are marked *

Related Products