ರಂಗಸ್ವಾಮಿ ಮೂಕನಹಳ್ಳಿ

ತುಮಕೂರು ಜಿಲ್ಲೆಯ ಸಿರಾದಲ್ಲಿ ೧೮.೦೫.೧೯೭೫ ರಂದು ಜನನ. ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಗುತ್ತದೆ. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆಯುತ್ತಾರೆ. ೨೩ ನೆಯ ವಯಸ್ಸಿಗೆ ಕೆಲಸದ ಮೇಲೆ ದೇಶವನ್ನ ತೊರೆದು ದುಬೈ ಸೇರುತ್ತಾರೆ. ದುಬೈನಲ್ಲಿ ಮೂರು ತಿಂಗಳ ಕೆಲಸದ ನಂತರ ಸ್ಪೇನ್ ದೇಶದ ಬಾರ್ಸಿಲೋನಾ ನಗರ ೨೦೧೭ ರವರೆಗೆ ಇವರ ಮನೆಯಾಗುತ್ತದೆ. ಈ ಮಧ್ಯೆ ೨೦೦೧ ರಲ್ಲಿ ಇಂಗ್ಲೆಂಡ್ ನ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿಯನ್ನ ಪಡೆಯುತ್ತಾರೆ. ಇದರ ಜೊತೆಗೆ ಸರ್ಟಿಫೈಡ್ SAP FICO ಕನ್ಸಲ್ಟೆಂಟ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆಂಟ್ ಕೂಡ ಆಗಿದ್ದಾರೆ. ಶ್ರೀಯುತರು ವೃತ್ತಿ ಹಾಗೂ ಪ್ರವೃತ್ತಿಯ ಸಲುವಾಗಿ ಇಲ್ಲಿಯವರೆಗೆ ೬೦ ದೇಶಗಳನ್ನ ಸುತ್ತಿದ್ದಾರೆ. ಹೀಗೆ ತಾವು ಕಂಡ ದೇಶಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕನ್ನಡಪ್ರಭ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಸಮಾಜಮುಖಿ ಮತ್ತು ವಿಕ್ರಮ ಪತ್ರಿಕೆಗಳಲ್ಲಿ ಲೇಖನಗಳನ್ನ ಬರೆದಿದ್ದಾರೆ. ಅಲ್ಲದೆ ತಾವು ಕಂಡ ದೇಶಗಳ ಪ್ರವಾಸಿ ಕಥನವನ್ನ ತರಂಗ, ಸುಧಾ, ವಿಜಯನೆಕ್ಸ್ಟ್, ಡಿಜಿಟಲ್ ಕನ್ನಡ ಮತ್ತು ರೀಡೂ ಕನ್ನಡದಲ್ಲಿ ಬರೆದಿದ್ದಾರೆ. ಇವರ `ಹಣಕ್ಲಾಸು’ ಅಂಕಣ ಪ್ರತಿ ಗುರುವಾರ ಪ್ರಕಟವಾಗುತ್ತಿದೆ. ಪ್ರವಾಸಿ ಕಥನದ ಅಂಕಣ `ಬಾರ್ಸಿಲೋನಾ ನೆನಪುಗಳು’ ದಟ್ಸ್ ಕನ್ನಡದಲ್ಲಿ ಪ್ರತಿ ಭಾನುವಾರ ಬೆಳಕು ಕಾಣುತ್ತಿದೆ. ಅಲ್ಲದೆ ಭಾರತೀಯ ಸಮಾಜದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಕ್ರಮ ವಾರಪತ್ರಿಕೆಯಲ್ಲಿ ಪಾಕ್ಷಿಕವಾಗಿ ಬರಹಗಳು ಪ್ರಕಟವಾಗುತ್ತಿವೆ. ಒಂದೂವರೆ ದಶಕದ ಸ್ಪೇನ್ ಬದುಕು ಸ್ಪ್ಯಾನಿಷ್ ಭಾಷೆಯನ್ನ ಕಲಿಸಿದೆ. ಪ್ರತಿ ಮಂಗಳವಾರ `ಸ್ಪ್ಯಾನಿಷ್ ಗಾದೆಗಳು’ ಎನ್ನುವ ಅಂಕಣ ಕೂಡ ಬರೆದಿದ್ದಾರೆ. ವಿಜಯ ಕರ್ನಾಟಕದಲ್ಲಿ ‘ಡೈಲಿ ಮನಿ’ ಎನ್ನುವ ಅಂಕಣ ಕೂಡ ಬಹಳ ಜನಪ್ರಿಯವಾಗಿತ್ತು. ಇಲ್ಲಿಯವರೆಗೆ ೭೫೦ಕ್ಕೂ ಹೆಚ್ಚು ಪ್ರಕಟಿತ ಬರಹಗಳು ಇವರ ಹೆಸರಲ್ಲಿದೆ.