ಗಣೇಶ್ ಕಾಸರಗೋಡು

ಕನ್ನಡ ಪತ್ರಿಕೋದ್ಯಮದಲ್ಲಿ ಚಿರ ಪರಿಚಿತ ಹೆಸರು ಗಣೇಶ್ ಕಾಸರಗೋಡು. ಕಾಸರಗೋಡಿನಲ್ಲಿ ಹುಟ್ಟಿದ ಗಣೇಶ್ ವಿದ್ಯಾಭ್ಯಾಸವನ್ನು ಅಲ್ಲಿಯೇ ಕಂಪ್ಲೀಟ್ ಮಾಡಿ ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಗಣೇಶ್ ಕಾಸರಗೋಡು ಅವರನ್ನು ಕೈಬೀಸಿ ಕರೆದಿದ್ದು ಪತ್ರಿಕೋದ್ಯಮ. ಮೊದಲು ಚಿತ್ರದೀಪದಲ್ಲಿ ಕೆಲಸ ಮಾಡಿದ ಗಣೇಶ್ ಕಾಸರಗೋಡು ನಂತರ ಚಿತ್ರತಾರಾ ಹಾಗೂ ಅರಗಿಣಿಯಲ್ಲಿ ಸೇವೆಸಲ್ಲಿಸಿದರು. ಬಳಿಕ ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಣೇಶ್ ಕಾಸರಗೋಡು ಅವರ ಪತ್ರಿಕೋದ್ಯಮ ಸೇವೆಯನ್ನ ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ, ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಹಲೋ ಗಾಂಧಿನಗರ್ ಪ್ರಶಸ್ತಿ ಹಾಗೂ ವೈಎನೈ ಸಾಹಿತ್ಯ ಪ್ರಶಸ್ತಿಗಳು ಸಂದಿವೆ. ಗಣೇಶ್ ಕಾಸರಗೋಡು ಅವರ ಲೇಖನಿಯಲ್ಲಿ ಮೂಡಿ ಬಂದಿರುವ ಚದುರಿದ ಚಿತ್ರಗಳು, ಮೌನ ಮಾತಾದಾಗ, ಹೇಗಿದ್ದ ಹೇಗಾದ ಗೊತ್ತಾ? ನೆನಪಿನಂಗಳದಲ್ಲಿ ಶಂಕರ್ ನಾಗ್, ಬಣ್ಣ ಮಾಸಿದ ಬದುಕು, ಆಫ್ ದಿ ರೆಕಾರ್ಡ್, ಬೆಳ್ಳಿ ತೆರೆಯ ಅಮೃತ ಕಳಶ, ಗುರಿ-ಹೆಗ್ಗುರಿ ಸೇರಿದಂತೆ ಇನ್ನೂ ಸಾಕಷ್ಟು ಪುಸ್ತಕಗಳು ಪ್ರಕಟಗೊಂಡಿವೆ.