ರಮೇಶ್ ಅರವಿಂದ್

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ಲೇಖಕ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್ ಜನಿಸಿದ್ದು ಸೆಪ್ಟೆಂಬರ್ 10.1964ರಲ್ಲಿ. ಗೋವಿಂದಾಚಾರಿ ಹಾಗೂ ಸರೋಜ ದಂಪತಿಯ ಮಗನಾಗಿ ಜನಿಸಿದ ರಮೇಶ್ ಅರವಿಂದ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ಓದಿನಲ್ಲಿ ಸದಾ ಮುಂದಿದ್ದ ರಮೇಶ್ ಅರವಿಂದ್ ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿ ಶಹಭಾಷ್ ಎನಿಸಿಕೊಂಡಿದ್ದರು. ಪ್ರಶಸ್ತಿ ಪ್ರಧಾನ ಮತ್ತಿತರ ಸಮಾರಂಭಗಳ ನಿರೂಪಣೆ ಮಾಡುತ್ತಿದ್ದ ರಮೇಶ್ ಅರವಿಂದ್ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಪರಿಚಯ’ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ದೊರಕಿತು. ದಿವಂಗತ ಶಂಕರ್ ನಾಗ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಮುಂದುವರೆಸಿಕೊಂಡು ಹೋದ ರಮೇಶ್ ಅರವಿಂದ್ ಆ ಮೂಲಕ ಸಾಕಷ್ಟು ಹೆಸರು ಮಾಡಿದರು. ಆ ಬಳಿಕ ‘ಮೌನ ಗೀತೆ’ ಸಿನಿಮಾದಲ್ಲಿ ನಟಿಸಿದರು. ಇದೇ ವೇಳೆ ನಿರ್ದೇಶಕ ಕೆ. ಬಾಲಚಂದರ್ ಕಣ್ಣಿಗೆ ಬಿದ್ದ ರಮೇಶ್ ಅರವಿಂದ್ ಅವರಿಗೆ ‘ಸುಂದರ ಸ್ವಪ್ನಗಳು’ ಸಿನಿಮಾ ದೊಟ್ಟ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಕನ್ನಡಿಗರ ಮನ ಗೆದ್ದ ರಮೇಶ್ ಅರವಿಂದ್ ಆ ಬಳಿಕ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ದೊಡ್ಟ ಮಟ್ಟದಲ್ಲಿ ಹೆಸರು ಮಾಡಿದರು. ನಟನೆಯ ಜೊತೆಗೆ ನಿರ್ದೇಶನದಲ್ಲಿಯೂ ಸೈ ಎನಿಸಿಕೊಂಡು ರಮೇಶ್ ಅರವಿಂದ್ ಆಕ್ಷನ್ ಸಿನಿಮಾಗಳು ಹೆಚ್ಚು ಯಶಸ್ವಿ ಆಗುತ್ತಿದ್ದ ಸಮಯದಲ್ಲಿಯೂ ತಮ್ಮದೇ ಆದ ಭಿನ್ನ ಹಾದಿಯನ್ನ ಹಿಡಿದು, ಕಾಮಿಡಿ, ಡ್ರಾಮಾ, ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಖ್ಯಾತಿ ಘಳಿಸಿದರು. ಹಲವು ಟಿವಿ ಶೋಗಳ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿರುವ ರಮೇಶ್ ಅರವಿಂದ್ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ರಿಯಲ್ ಹಿರೋ.