ವಿಶ್ವೇಶ್ವರ್ ಭಟ್

ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ. ನಂತರ ಕನ್ನಡ ಪ್ರಭದಲ್ಲಿ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ವಿಜಯ ಕರ್ನಾಟಕ, ಕನ್ನಡ ಪ್ರಭ, ಸುವರ್ಣ ನ್ಯೂಸ್ ಚಾನಲ್ ನ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿರುವ ವಿಶ್ವೇಶ್ವರ ಭಟ್ಟರು ಸದ್ಯ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೂರೆಂಟು ವಿಶ್ವ, ಇದೇ ಅಂತರಂಗ ಸುದ್ದಿ ಹಾಗೂ ವಿದೇಶ ಕಾಲ ಶೀರ್ಷಿಕೆಯ ಅಂಕಣಕಾರರಾಗಿ ಕೆಲಸ ನಿರ್ವಹಿಸಿದ್ದ ಭಟ್ಟರು ಇದುವರೆಗೂ ಸುಮಾರು 64ಕ್ಕೂ ಹೆಚ್ಚು ಪುಸ್ತಕಗಳನ್ನ ಬರೆದಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜೊತೆ ಹದಿನಾಲ್ಕು ದಿನಗಳ ಕಾಲ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ ಸೇರಿದಂತೆ ಇನ್ನೂ ಕೆಲ ದೇಶಗಳನ್ನ ಸುತ್ತಿದ ಅನುಭವ ಇವರದ್ದು.