ಮಂಜುನಾಥ್ ಚಾಂದ್

ಕಡಲತಡಿಯ ತಾಸಿ ಇವರ ಊರು, ಅದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ, ತಂದೆ ರಂಗನಾಥ್ ಚಾಂದ್‌ ಮತ್ತು ತಾಯಿ ಸೀತಾ, ಪದವಿ ಪಡೆದಿದ್ದು ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿ ಮೈಸೂರು ವಿವಿಯಲ್ಲಿ, ಪತ್ರಕರ್ತ ವೃತ್ತಿಗೆ, ಬರೆಯುವ ತುಡಿತಕ್ಕೆ ಮೊದಲು ನೀರೆರೆದಿದ್ದು ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’. ಅಲ್ಲಿಂದ ಮುಂದೆ ‘ಸಂಯುಕ್ತ ಕರ್ನಾಟಕ’, ‘ಕನ್ನಡಪ್ರಭ’, ‘ಉದಯ ಟಿವಿ’, ಟೈಮ್ಸ್ ಆಫ್ ಇಂಡಿಯಾ ಕನ್ನಡ, ವಿಜಯಾ ನೆಕ್ಸ್, ವಿಜಯವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರ, ಉಪಸಂಪಾದಕ, ಸಹಾಯಕ ಸಂಪಾದಕ ಸೇರಿ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಬಳಿಕ ರವಿ ಬೆಳಗೆರೆ ಅವರ ಸಾರಥ್ಯದ ‘ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕ.
ಮೊದಲ ಕತಾ ಸಂಕಲನ ‘ಕದ ತೆರೆದ ಆಕಾಶ’ ಪ್ರಬಂಧ ಸಂಕಲನ ‘ಅಮ್ಮ ಕೊಟ್ಟ ಜಾಜಿದಂಡೆ’. ಮೊದಲ ಕಾದಂಬರಿ ‘ಕಾಡ ಸೆರಗಿನ ಸೂಡಿ’, ‘ಭುಗಿಲು’ ಎಂಬ ಹೆಸರಿನ ಚಲನಚಿತ್ರವಾಗಿರುವ ಈ ಕಾದಂಬರಿಗೆ ಪ್ರತಿಷ್ಠಿತ ‘ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿ’ಯೂ ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರು ಪ್ರಕಟಿಸಿರುವ ಕೃತಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ-ಬಸರೂರು- ಕುಂದಾಪುರ’, ಅಕ್ಷರ ಮಂಡಲ ಪ್ರಕಾಶನ ಮತ್ತು ಬುಕ್‌ಮಾಡಿ ಡಾಟ್ ಕಾಮ್‌ನ ಮಾಲೀಕರು. ಖುಶ್ವಂತ್ ಸಿಂಗ್ ಅವರ ಕಾದಂಬರಿ ‘ಸನ್‌ಸೆಟ್ ಕ್ಲಬ್ ಕನ್ನಡಕ್ಕೆ ಭಾಷಾಂತರ ಸೇರಿದಂತೆ ಕಳೆದ ಕೆಲ ವರ್ಷಗಳಿಂದ ಭಾಷಾಂತರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸಂಸ್ಥೆಗಳ ಜೊತೆಗೆ ಅನುವಾದ ಕಾರ್ಯದಲ್ಲಿ ಸಕ್ರಿಯ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ 20ಕ್ಕೂ ಹೆಚ್ಚು ವರ್ಷ ನಿರ್ದೇಶಕ, ಕಾರ್ಯನಿರ್ವಾಹಕ ನಿದೇರ್ಶಕರಾಗಿ ಕೆಲಸ. ಈಗ ಬೆಂಗಳೂರಿನಲ್ಲಿ ಪುಟ್ಟ ಗೂಡು ಮತ್ತು ಪುಟ್ಟ ಸಂಸಾರ.