ಮಂಜುನಾಥ್ ಕುಣಿಗಲ್

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ೧೯೮೨ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. ೨೦೦೧ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (JSW) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ಆ ನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಅಲ್ಲಿ ಸುದೀರ್ಘ
೧೦ ವರ್ಷಗಳ ಜೀವನ. ಯುದ್ಧಪೀಡಿತ ದೇಶಗಳಲ್ಲಿ ನ್ಯಾಟೋ ಮತ್ತು ವಿಶ್ವಸಂಸ್ಥೆಗೆ ನೆರವಾಗುತ್ತಿದ್ದ ಜರ್ಮನ್ ಮೂಲದ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ವಿ ಭಾಗದ ಉಪ-ಮುಖ್ಯಸ್ಥನಾಗಿ ಕೆಲಸ. ನಂತರ ಸ್ವಲ್ಪ ಕಾಲ ನೆಲೆಸಿದ್ದು ಉತ್ತರ ಮೆಸಿಡೋನಿಯಾದಲ್ಲಿ. ೨೦೧೮ರಿಂದ ಈಚೆಗೆ ಮೈಸೂರಿನಲ್ಲಿ ನೆಲೆಸಿ ಸದ್ಯಕ್ಕೆ ಮನೆಯಿಂದಲೇ ಸಿಂಗಾಪುರಿನ ಕಂಪನಿಯೊಂದಕ್ಕೆ ಕನ್ಸಲ್ಟೆಂಟ್ ಇಂಜಿನಿಯರಾಗಿ
ವೃತ್ತಿ. ಕೆಲಸದ ಸಲುವಾಗಿ ಯುದ್ಧಪೀಡಿತವಾಗಿದ್ದ ಆಫ್ಘಾನಿಸ್ತಾನ್ ಮತ್ತು ಇರಾಕ್ ಸೇರಿದಂತೆ, ಇತರೆ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೇರಿಕ ದೇಶಗಳನ್ನು ಹಲವಾರು ಬಾರಿ ಸುತ್ತಿದ ಅನುಭವವಿದೆ. ಕನ್ನಡ ಸಾಹಿತ್ಯ ಓದುವ ಹವ್ಯಾಸ ಚಿಕ್ಕಂದಿನಿಂದಲೇ ಇದ್ದು ಸಣ್ಣಪುಟ್ಟ ಲೇಖನಗಳು, ಕಥೆಗಳು, ಪ್ರವಾಸ ಮತ್ತು ಅನುಭವ ಕಥನ ಬರೆಯುವ ಹವ್ಯಾಸಿ ಬರಹಗಾರ. ವಿಜಯ ಕರ್ನಾಟಕ ಮತ್ತು ವೀರಲೋಕ ಪ್ರಕಾಶನ ಆಯೋಜಿಸಿದ್ದ ೨೦೨೨ರ ದೀಪಾವಳಿ ಕಥಾಸ್ಪರ್ಧೆಯಲ್ಲಿ ಇವರ ಕಥೆಗೆ ಮೆಚ್ಚುಗೆ ಬಹುಮಾನ ಬಂದಿದೆ.