ಕನ್ನಡ ಪ್ರೇಮಕಾವ್ಯಗಳಲ್ಲಿ ಇದೊಂದು ವಿಲಕ್ಷಣವಾದ ನಾಟ್ಯದ ರಚನೆ... ಕನ್ನಡ ಕಾವ್ಯಪ್ರಪಂಚಕ್ಕೆ ಈ ದಿನಗಳಲ್ಲಿ ಪ್ರವೇಶ ಮಾಡಿರುವ ಈ ಪದ್ಯ ಘನವಾದ ಒಂದು ಅನುಭವವನ್ನು ಸರಳವಾಗಿಯೇ ಅಭಿವ್ಯಕ್ತಗೊಳಿಸುತ್ತದೆ. ಬೇಂದ್ರೆಯವರು ಹೇಳುತ್ತಾರಂತೆ: “ಭಾಷೆ ಬೆದರಿ ಕಾವ್ಯವಾಗುತ್ತದೆ.” ತೇಜಶ್ರೀ ಕವನದಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ. ಯು.ಆರ್.ಅನಂತಮೂರ್ತಿ
ರತಿಯು ಬೇಲಿ ದಾಟಿ ನಾಲ್ಲು ದಾಪು ನಡೆದು ಬಾವಿ ತಲುಪಿ ಕಟ್ಟೆಯ ಹಸಿರು ಮೆತ್ತೆ ಮೇಲೆ ಕುಳಿತಳು. ಪಾಚಿಯನ್ನು ನೇವರಿಸಿದಳು. ಸಮಾಧಾನವೆನ್ನಿಸಿತು. ನೀರಿನ ಮೇಲೈಯು ಗಾಳಿಗೆ ಕಂಪಿಸುತ್ತ ತರಂಗಗಳು ಹುಟ್ಟಿ, ಬೆಳೆದು, ಮತ್ತೆ ಹುಟ್ಟಿ ಬೆಳೆದು ಅಂತರ್ಧಾನ ಆಗುವುದನ್ನು ನೋಡತೊಡಗಿದಳು. ಅದೊಂದು ಮುಗಿಯದ ವರ್ತುಲವಾಗಿ ಯಾವುದು ಶುರು, ಎಲ್ಲಿಗೆ ಕೊನೆ ಎಂದು ಅವಳಿಗೆ ಬಗೆಹರಿಯಲಿಲ್ಲ. ಬಿಸಿಲು ಇಳಿಯುತ್ತಿತ್ತು. ಕುಳಿತಿದ್ದ ರತಿ ಎದ್ದಳು. ಅವಳು ಇನ್ನೂ ನೀರಿನ ಮೈಯನ್ನೇ ನೋಡುತ್ತಿದ್ದಳು. ತಿಳಿಬಣ್ಣದ ನೀರು ಮರದ ನೆರಳು, ಸಂಜೆಯ ಛಾಯೆಯ ಜೊತೆ ಸೇರಿಕೊಂಡು ಕಪ್ಪಾಗಿ ಕಾಣುತ್ತಿತ್ತು. ರತಿಯ ಕಣ್ಣಿಗೆ ಗಳಿಗೆ ಗಳಿಗೆಗೂ ಆ ಕಪ್ಪು ಗಾಡವಾಗುತ್ತ ಹೋದಂತೆನಿಸಿ, ಒಂದು ಹಂತದಲ್ಲಿ ಎಲ್ಲ ಕಡೆ ಕಪ್ಪು ಆವರಿಸಿಕೊಂಡುಬಿಟ್ಟಿತು. ಆ ಕ್ಷಣ ಸುತ್ತಲ ಶಬ್ದಗಳೂ ಸದ್ದಡಗಿ, ಕತ್ತಲ ಸುರಂಗದೊಳಗೆ ಹೋಗುತ್ತಿರುವ ಅನುಭವವಾಯಿತಷ್ಟೆ,