ಡಾ. ಗವಿಸ್ವಾಮಿ ಎನ್

ನನ್ನ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ, ವಡ್ಡಗೆರೆ. ಬಿಳಿಗಿರಿರಂಗನ ಬೆಟ್ಟದ ಮಡಿಲಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದ ಶಿಕ್ಷಣ ನನ್ನ ಬದುಕಿಗೆ ತಿರುವನ್ನು ನೀಡಿತು. ನನ್ನ ಸಾಹಿತ್ಯಾಸಕ್ತಿಗೆ ನೀರೆರೆಯಿತು. ೨೦೦೦ನೇ ಇಸವಿಯಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಿವಿಎಸ್ಸಿ ಓದಲು ಸೇರಿಕೊಂಡ ನಂತರ ನಿಯಮಿತವಾಗಿ ಪ್ರಜಾವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳ ವಾಚಕರ ವಾಣಿ ವಿಭಾಗಕ್ಕೆ ಪತ್ರಗಳನ್ನು ಬರೆಯತೊಡಗಿದೆ.

ಇಪ್ಪತ್ತೆöÊದು ಪೈಸೆಯ ಕಾರ್ಡಿನಲ್ಲಿ ಸಣ್ಣ ಇರುವೆ ನುಸುಳುವುದಕ್ಕೂ ಆಸ್ಪದ ಕೊಡದಷ್ಟು ಜಿಪುಣತನದಿಂದ ಪತ್ರ ಬರೆದು ಪೋಸ್ಟ್ ಮಾಡಿ ನಾಲ್ಕೆöÊದು ದಿನಗಳವರೆಗೆ ಬಕಪಕ್ಷಿಯಂತೆ ಕಾಯುತ್ತಿದ್ದೆ. ಎಲ್ಲರಿಗಿಂತ ಮುಂಚೆ ಹಾಸ್ಟೆಲ್ಲಿನ ವಾಚನ ಕೊಠಡಿಗೆ ಧಾವಿಸಿ ಪತ್ರಿಕೆಗಳನ್ನು ಸರಬರನೆ ಬಿಡಿಸುತ್ತಿದ್ದೆ. ವಾಚಕರವಾಣಿ ವಿಭಾಗದಲ್ಲಿ ನನ್ನ ಪತ್ರವನ್ನು ಕಂಡಾಗ ಖುಷಿಯಿಂದ ಹಿಗ್ಗುತ್ತಿದ್ದೆ. ಕಾಡಂಚಿನ ಹುಡುಗನಾದ ನನಗೆ ನಾಡಿನ ಮಹತ್ವದ ಪತ್ರಿಕೆಗಳಲ್ಲಿ ನನ್ನ ಹೆಸರು ಕಾಣಿಸಿಕೊಂಡಾಗ ಉಂಟಾಗುತ್ತಿದ್ದ ರೋಮಾಂಚನ ಅವರ್ಣನೀಯ. ಜವಾಹರ್ ನವೋದಯ ವಿದ್ಯಾಲಯದ ಗ್ರಂಥಾಲಯದಲ್ಲಿ ಓದಲು ವಿಪುಲವಾಗಿ ಸಾಹಿತ್ಯ ಕೃತಿಗಳು ದೊರೆತಿದ್ದು, ಪಶುವೈದ್ಯಕೀಯ ಕಾಲೇಜಿನ ಹಾಸ್ಟೆಲ್ಲಿನಲ್ಲಿ ವಿಪರೀತ ಹಸಿವಿನಿಂದ ಕನ್ನಡದ ದಿನಪತ್ರಿಕೆಗಳು ಮತ್ತು ಮ್ಯಾಗಜೀನ್‌ಗಳನ್ನು ಓದುತ್ತಿದ್ದುದು ನನ್ನ ಭವಿಷ್ಯದ ಸಾಹಿತ್ಯ ಸೃಷ್ಟಿಗೆ ಬುನಾದಿ ಹಾಕಿತು.

ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪಶುಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ವೃತ್ತಿ ಅನುಭವಗಳೇ ನನ್ನ ಬರವಣಿಗೆಗೆ ಮೂಲಸೆಲೆ. “ಚಕ್ರ”-ಸಣ್ಣಕಥೆಗಳ ಸಂಕಲನ ನನ್ನ ಚೊಚ್ಚಲ ಕೃತಿ. ೨೦೧೯ರಲ್ಲಿ ಮೈಸೂರಿನ ಸಾಹಿತ್ಯ ಸುಧೆ ಪ್ರಕಾಶನದಿಂದ ಪ್ರಕಟಗೊಂಡು ೨೦೨೦ರಲ್ಲಿ ಎರಡನೇ ಮುದ್ರಣ ಕಂಡಿದೆ. ಈ ಕೃತಿಗೆ ಹೂವಿನಹಡಗಲಿಯ ಟಿ.ಎಂ.ಆರ್. ಪಬ್ಲಿಕೇಷನ್ಸ್ ಸಂಸ್ಥೆ ೨೦೧೯ನೇ ಸಾಲಿನ “ಸುಲೋಚನ ಸಾಹಿತ್ಯ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. “ಪ್ರಾಣಿಗಳೇ ಗುಣದಲಿ ಮೇಲು!”-ಪಶುವೈದ್ಯನ ಅನುಭವ ಕಥನ (೨೦೨೨) ನನ್ನ ಎರಡನೇ ಕೃತಿ.

ಮೊದಲ ಮುದ್ರಣ ಬೆಂಗಳೂರಿನ ಪಶುಪಕ್ಷಿ ಪ್ರಕಾಶನದಿಂದ ಪ್ರಕಟಗೊಂಡಿದೆ. ಎರಡನೇ ಮುದ್ರಣವನ್ನು ಮೈಸೂರಿನ ಕವಿತಾ ಪ್ರಕಾಶನ ಪ್ರಕಟಿಸಿದೆ. ಕನ್ನಡ ಸಾಹಿತ್ಯ ಪ್ರೇಮಿಗಳು ನನ್ನ ಎರಡೂ ಪುಸ್ತಕಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸ್ಪಂದನೆಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ವೀರಲೋಕ ಬುಕ್ಸ್ ಸಂಸ್ಥೆಯು ನನ್ನ ಮೂರನೇ ಕೃತಿ “ತ್ಯಾಗಕ್ಕಿಲ್ಲ ನೂಕುನುಗ್ಗಲು”-ಅತಿ ಸಣ್ಣ ಕಥೆಗಳ ಸಂಕಲನವನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಸಂತಸದಾಯಕ ವಿಚಾರವಾಗಿದೆ. ಹಳ್ಳಿಗಳಲ್ಲಿ ಕಳೆದು ಹೋಗುತ್ತಿದ್ದ ಬರಹಗಾರರನ್ನು ಗುರುತಿಸಿ ದೊಡ್ಡ ವೇದಿಕೆಯಲ್ಲಿ ಪರಿಚಯಿಸುವ ನಿಸ್ವಾರ್ಥ ಸಾಹಿತ್ಯ ಸೇವೆಗೆ ಇಳಿದಿರುವ ವೀರಲೋಕ ಸಂಸ್ಥೆಗೆ ಅನಂತ ವಂದನೆಗಳು, ಕೃತಜ್ಞತೆಗಳು. ಕನ್ನಡ ಸಾಹಿತ್ಯಾಸಕ್ತ ಬಂಧುಗಳ ಪ್ರೋತ್ಸಾಹವೇ ನನಗೆ ಜೀವಾಳ. ಕಾಡಂಚಿನ ಒಂದು ಹಳ್ಳಿಯ ಈ ಹವ್ಯಾಸಿ ಬರಹಗಾರನನ್ನು ಸದಾಕಾಲ ಪೊರೆಯಿರಿ ಎಂದು ಮನದಾಳದಿಂದ ಕೋರುತ್ತೇನೆ.