ಡಾ. ವಾಸುದೇವ ಶೆಟ್ಟಿ

ಡಾ. ವಾಸುದೇವ ಶೆಟ್ಟಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶರಾವತಿ ಹೊಳೆಸಾಲಿನ ಜಲವಳ್ಳಿಯವರು, ಪ್ರಕೃತಿ ರಮಣೀಯ ತಾಣವಾದ ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು ಆರನೆ ತರಗತಿಯಿಂದ ಪದವಿಯ ವರೆಗೆ ಹೊನ್ನಾವರದಲ್ಲಿ ಓದಿದರು. ಕನ್ನಡ ಪ್ರಧಾನ ವಿಷಯದೊಂದಿಗೆ ಪ್ರಶಸ್ತಿ ಸಹಿತ ಪದವಿ ಪಡೆದ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ಕಾರವಾರದಲ್ಲಿ ಮೂರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿ ನಂತರ ಊರಿನಲ್ಲಿ ಎರಡು ವರ್ಷ ಕೃಷಿ ಮಾಡಿದರು. ಮದುವೆಯಾಗಿ ಮಗ ಹುಟ್ಟಿದ ಬಳಿಕ 1990ರಲ್ಲಿ ಬೆಳಗಾವಿಯಲ್ಲಿ ಪತ್ರಿಕೋದ್ಯೋಗಿಯಾದರು. 1997 ಫೆ. 18ರಂದು ಕನ್ನಡಪ್ರಭ ಸೇರಿ 2020ರ ಡಿಸೆಂಬರ್ 31ರಂದು ನಿವೃತ್ತರಾದರು. ಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯ ವಿಮರ್ಶೆ ಮತ್ತು ಗ್ರಾಹಕ ಹಿತರಕ್ಷಣೆ ಅವರ ಆಸಕ್ತಿಯ ಕ್ಷೇತ್ರಗಳು. ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪತ್ರಿಕೆಗಳ ಪಾತ್ರ’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದು, ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ವಾಸುದೇವ ಶೆಟ್ಟಿಯವರ ಪ್ರಕಟಿತ ಕೃತಿಗಳು:
1. ಅವಸ್ಥೆ-ಕವನ ಸಂಕಲನ
2. ಬಲೆ-ಕಾದಂಬರಿ
3. ಕಾಲುಬಂದ ಕುರುವ-ಕಥಾಸಂಕಲನ
4. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ -ಪಿಎಚ್.ಡಿ. ಮಹಾಪ್ರಬಂಧ
5. ತೇರಿಗೆ ಹೋಗುವ ಬಾರೆ ತಂಗಿ-ಪ್ರಬಂಧ ಸಂಕಲನ
6. ಗ್ರಾಹಕ ರಕ್ಷಕ-ಗ್ರಾಹಕ ನ್ಯಾಯಾಲಯಗಳ ತೀರ್ಪುಗಳು
7. ಕ್ಷಯ-ಕಾದಂಬರಿ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು:
8. ಕೃತಿ ನಿಕಷ-ಪುಸ್ತಕಾವಲೋಕನಗಳ ಸಂಕಲನ
9. ಜಗತ್‌ ಪ್ರಸಿದ್ಧ ಗೂಢಚಾರರು-ಸತ್ಯಕತೆಗಳು
10. ಶಬ್ದಪುರಾಣ-ಶಬ್ದಾವಲೋಕನ ಅರ್ಪಣೆ