ಡಿ ವಿ ಗುಂಡಪ್ಪ

ಡಿ ವಿ ಜಿ(ಮಾರ್ಚ್ ೧೭, ೧೮೮೭ – ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.
ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು.

ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು.

ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ.