ದ ರಾ ಬೇಂದ್ರೆ

ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು ‘ಕನ್ನಡದ ವರಕವಿ’ ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ.

ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ ‘ನಾಕುತಂತಿ’ ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಪ್ರಶಸ್ತಿ ಪುರಸ್ಕೃತ ಕೃತಿ ‘ನಾಕುತಂತಿ’ ನಲವತ್ತು ನಾಲ್ಕು ಕವನಗಳ ಒಂದು ಪುಟ್ಟ ಸಂಕಲನ ಗ್ರಂಥ. ಇದು ಆತ್ಮ-ಆಧ್ಯಾತ್ಮ, ಲೌಕಿಕ-ಪಾರಮಾರ್ಥ, ವ್ಯಕ್ತಿ-ಶಕ್ತಿ, ಕೃಷಿ-ರಾಜಕೀಯ, ಭಕ್ತಿ-ಬೋಧೆ, ಶ್ರವಣ-ಅಂತಃಕರಣ – ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ.

ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ಆಧ್ಯಾತ್ಮಿಕ ತಂತ್ರಗಳನ್ನು, ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಶೈಲಿ, ಗ್ರಾಮೀಣ ಮತ್ತು ಜಾನಪದ ಸಾಹಿತ್ಯ ಆಡುಭಾಷೆಯ ನುಡಿಗಟ್ಟುಗಳು ಯತೇಚ್ಛವಾಗಿ ಬಳಸಿದ್ದಾರೆ.

ದಾರ್ಶನಿಕತೆ ಬೇಂದ್ರೆ ಸಾಹಿತ್ಯದ ವಿಶೇಷತೆ. ಅವರ ‘ಪಾತರಗಿತ್ತಿ ಪಕ್ಕ’ ಕವನ, ಶಿಶು ಗೀತೆಯಾಗಿ ಹಾಡಲ್ಪಟ್ಟರೂ ಅದು ಮನುಷ್ಯನ ಪ್ರಲೋಭನೆಯನ್ನು ವಿವರಿಸುತ್ತದೆ. ‘ಮೂಡಲಮನೆಯ’ ಕವನವು ಸರ್ವ ವ್ಯಾಪಿ ಶಾಂತಿ ಮತ್ತು ಅದನ್ನು ಸ್ಥಾಪಿಸುವ ಕವಿಯ ಹಂಬಲದ ಪ್ರತೀಕವಾಗಿದೆ. ಹಾಗೆಯೇ ‘ಕುಣಿಯೋಣು ಬಾರಾ’ ಕವನವು ವೈವಿಧ್ಯಮಯವಾದ ವಿಚಾರ ಲಹರಿಗಳ ಮಹಾ ಸಂಗಮದ ದ್ಯೋತಕವಾಗಿದೆ. ಮೇಲ್ನೋಟಕ್ಕೆ ಬೇಂದ್ರೆಯವರ ಸಾಹಿತ್ಯವು ಪ್ರಾಸಬದ್ಧ ಸಂಗೀತಕ್ಕೆ ಅಳವಡಿಸಿಕೊಂಡತ್ತಿದ್ದರೂ ಅದರ ಒಳಾರ್ಥ ಕೇವಲ ಕಾವ್ಯಾತ್ಮಕ ಮನಸ್ಸು ಅರ್ಥಮಾಡಿಕೊಳ್ಳಬಲ್ಲಂತಹದು.