ಕುಮಾರಸ್ವಾಮಿ ತೆಕ್ಕುಂಜ

ಇಂಜಿನಿಯರಿoಗ್ ಪದವೀಧರರಾದ ಕುಮಾರಸ್ವಾಮಿ ತೆಕ್ಕುಂಜ ಅವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು. ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿoಗ್ ಪದವಿ ಪಡೆದ ಬಳಿಕ ಮುಂಬಯಿಯ ಫಿಯಟ್ ಆಟೊಮೊಬಾಯಿಲ್ಸ್ ಸಂಸ್ಥೆಯಲ್ಲಿ ಸುಮಾರು ಹದಿನೈದು ವರ್ಷ ಸೇವೆ ಸಲ್ಲಿಸಿ, ನಂತರ ನಾಸಿಕದ ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯಲ್ಲಿ ಐದು ವರ್ಷ, ಬೆಂಗಳೂರಿನ ಜನರಲ್ ಮೋಟರ‍್ಸ್ ಟೆಕ್ನಿಕಲ್ ಸೆಂಟರ್‌ನಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾದವರು.
ನಿವೃತ್ತಿಯ ಬಳಿಕ ಹುಟ್ಟೂರಾದ ಅರಂಬೂರಿನಲ್ಲಿ ನೆಲೆಸಿರುವ ಕುಮಾರಸ್ವಾಮಿಯವರಿಗೆ ಓದುವ ಹವ್ಯಾಸ ಬಾಲ್ಯದಿಂದಲೇ ಇದ್ದರೂ ಕನ್ನಡದಲ್ಲಿ ಬರವಣಿಗೆಯನ್ನು ಆರಂಭಿಸಿದ್ದು ಇಳಿ ವಯಸ್ಸಿನಲ್ಲಿ. ಇವರ ಮೊದಲ ಕಾದಂಬರಿ `ಮಂಡೋದರಿ’ ಪ್ರಕಟವಾದಾಗ ಇವರಿಗೆ ೫೬ರ ವಯಸ್ಸು. ಇದಲ್ಲದೆ `ಆಶ್ರಯ’ ಎಂಬ ಚಾರಿತ್ರಿಕ ಕಾದಂಬರಿ, `ಪಾರುಪತಿಯ ಪಾರುಪತ್ಯ’ ಹವಿಗನ್ನಡ ಲಘುಬರಹಗಳ ಸಂಕಲನ, `ವಡಾಪಾವ್ ಕಟಿಂಗ್ ಚಾಯ್’ ಕಥಾ ಸಂಕಲನ ಇವರ ಪ್ರಕಟಿತ ಕೃತಿಗಳು. `ಅಂತರಿಕ್ಷ – ಗೋಪಾಲಕೃಷ್ಣ ಅಭಿನಂದನ ಗ್ರಂಥ’ ಇತ್ತೀಚೆಗೆ ಬಿಡುಗಡೆಯಾದ ಸಂಪಾದಿತ ಕೃತಿ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಗಾಗಿ `ಪಡಾರು ಮಹಾಬಲೇಶ್ವರ ಭಟ್ಟ’ ಮತ್ತು `ಪದ್ಮಶ್ರೀ ಗಿರೀಶ ಭಾರದ್ವಾಜ’ ಎಂಬ ಎರಡು ಕೃತಿಗಳನ್ನು ರಚಿಸಿದ್ದು ಪ್ರಕಟವಾಗಿವೆ.