ಅನಂತ ಕುಣಿಗಲ್

ಅನಂತ ಕುಣಿಗಲ್ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ದಿ. ಶ್ರೀಮಾನ್ ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ರಾಜ್ಯಾದ್ಯಂತ ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲಿ ಕನ್ನಡ ಪಾಂಚಜನ್ಯ ಸಂಘದ ಪ್ರಮುಖರಾಗಿ, ಎನ್.ಎಸ್.ಎಸ್ ಸಂಘಟನೆಯಲ್ಲಿ ಸ್ವಯಂಸೇವಕರಾಗಿ, ಕುಣಿಗಲ್ ಜಾನಪದ ಯುವ ಬ್ರಿಗೇಡ್ ನಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಘಮಲೇ ಇಲ್ಲದ ತಮ್ಮ ಹುಟ್ಟೂರಿನಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯ ನಿರ್ಮಿಸುವುದು ಇವರ ಸಾಹಿತ್ಯ ಜೀವನದ ಮುಖ್ಯ ಗುರಿಯಾಗಿದೆ.

ಪ್ರಕಟಿತ ಕೃತಿಗಳು : ಋಣಭಾರ, ಬದುಕು ಜಟಕಾಬಂಡಿ (ಕಥಾಸಂಕಲನಗಳು), ಮೂರನೆಯವಳು, ಎದೆಯ ದನಿ ಕೇಳಿರೋ (ಕವನಸಂಕಲನಗಳು), ರೌದ್ರಾವರಣಂ (ಕಾದಂಬರಿ)