ಅಡ್ಡಂಡ ಸಿ ಕಾರ್ಯಪ್ಪ

ಅಡ್ಡಂಡ ಸಿ ಕಾರ್ಯಪ್ಪ ದಕ್ಷಿಣದ ಕಾಶ್ಮೀರ ಹೆಸರುವಾಸಿಯಾದ ಕೊಡಗು ಜಿಲ್ಲೆಯವರು. ಅಡ್ಡಂಡ ಚಂಗಪ್ಪ ಮತ್ತು ಅಡ್ಡಂಡ ತಂಗಮ್ಮ ದಂಪತಿಯ ಪುತ್ರ, ಹುಟ್ಟಿದ್ದು 1961ರಲ್ಲಿ. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ತುಡಿತ, ಬಿ.ಎ. ಪದವಿಯ ನಂತರ ನೀನಾಸಮ್ ರಂಗಶಿಕ್ಷಣದಲ್ಲಿ ರಂಗಭೂಮಿ ತರಬೇತಿ, 15 ವರ್ಷ ಸೃಷ್ಟಿ ಕೊಡವರಂಗ ಎಂಬ ತಮ್ಮದೇ ಒಂದು ರೆಪರ್ಟರಿ ರಂಗತಂಡದ ಮೂಲಕ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಮ್ಯಾಕ್‌ಬೆತ್, ಹ್ಯಾಬ್ಲೆಟ್, ಕಿಂಗ್‌ಲಿಯರ್, ಈಡಿಪಸ್, ದಂಗೆಯ ಮುಂಚಿನ ದಿನಗಳು, ಅರುಂಧತಿ ಆಲಾಪ, ತಬರನ ಕಥೆ ಮುಂತಾದ ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ನಾಟಕಗಳು; ದಿವಾನ್ ಬೋಪಣ್ಣ, ಅಮರಕವಿ ಅಪ್ಪಚ್ಚ, ಮಿಲ್ಪಿಕಾರ, ಬದ್‌ಕ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೊಡವ ನಾಟಕಗಳ ನಿರ್ದೇಶನ. ಕನ್ನಡ ಮತ್ತು ಕೊಡವ ನಾಟಕ ಮತ್ತು ಇತಿಹಾಸದ ಹಲವು ಪುಸ್ತಕಗಳ ರಚನೆ, ಪ್ರಕಟಣೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ. ‘ಬಾಳ್ ಪೊಲಂದತ್’ ಎಂಬ ಕೊಡವ ಚಲನಚಿತ್ರದ ನಿರ್ದೇಶಕರಾಗಿ ಉತ್ತಮ ಪ್ರಾದೇಶಿಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ ಕಾರ್ಯಪ್ಪ ಹಾಗೆಯೇ, ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಭಾಷಾ ಸಮ್ಮಾನ್’ ಮತ್ತು ಕರ್ನಾಟಕದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳ ಗರಿ. ಪ್ರಸ್ತುತ ಭಾರತದ ಪ್ರತಿಷ್ಠಿತ ಸರ್ಕಾರಿ ಸ್ವಾಯತ್ತ ರಂಗಸಂಸ್ಥೆಯಾದ ಮೈಸೂರು ರಂಗಾಯಣದ ನಿರ್ದೆಶಕರು.